

ಮಂಗಳೂರು: ಕರ್ನಾಟಕದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಕರಾವಳಿ ಮೂಲದ ಮರಾಟಿಗರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ನ.9 ಮತ್ತು 10 ರಂದು ಮರಾಟಿಗರ ಸಮಗ್ರ ಬಲವರ್ಧನೆ ಮತ್ತು ಪ್ರಗತಿಗಾಗಿ ‘ಗದ್ದಿಗೆ’ ಮರಾಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರಾವಳಿ ಮರಾಠಿ ಸಮಾವೇಶದ ಅಧ್ಯಕ್ಷ ಎಚ್.ರಾಜೇಶ್ ಪ್ರಸಾದ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 22 ವರ್ಷಗಳ ಬಳಿಕ ಶಿಕ್ಷಣ, ಸಂಘಟನೆ ಹಾಗೂ ಸ್ವಾಭಿಮಾನದ ಧ್ಯೇಯದೊಂದಿಗೆ ಸಮಾವೇಶ ಆಯೋಜಿಸಲಾಗುತ್ತಿದೆ. ಮೂಲತಃ ಮಹಾರಾಷ್ಟ್ರದಿಂದ ವಲಸೆ ಬಂದು ಕರ್ನಾಟಕದ ಗುಡ್ಡಗಾಡಿನಲ್ಲಿ ವಾಸಿಸುತ್ತಿರುವ ಮರಾಟಿ ಸಮುದಾಯದ ಸುಮಾರು ಶೇ.80ರಷ್ಟು ಮಂದಿ ಇಂದಿಗೂ ಆರ್ಥಿಕವಾಗಿ ಹಿಂದುಳಿದಿದ್ದು, ಅನೇಕ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು. ಸುಮಾರು 15 ರಿಂದ 20 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದರು.
* ವಿವಿಧ ಗೋಷ್ಠಿ
ಸಮಾವೇಶದಲ್ಲಿ ಮರಾಟಿಗರ ವಿವಿಧ ಆಚಾರ- ವಿಚಾರ ಸಂಸ್ಕಾರಗಳನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ, ಮೂರು ಗೋಷ್ಠಿ, ಉಪನ್ಯಾಸ ಹಾಗೂ ಸನ್ಮಾನ ಮತ್ತು ಸಾಧಕರನ್ನು ಪುರಸ್ಕರಿಸುವ ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಮಾವೇಶ ಉದ್ಘಾಟಿಸಲಿದ್ದು, ನಮ್ಮ ಬಹು ನಿರೀಕ್ಷೆಯ ಗದ್ದಿಗೆ ಸ್ಮರಣ ಸಂಚಿಕೆಯನ್ನು ಡಾ.ಎಂ.ಮೋಹನ್ ಆಳ್ವ ಅವರು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಸಮಾಜದ ಶ್ರೇಷ್ಠ ಸಾಧನೆಯನ್ನು ಮಾಡಿರುವ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನ ಮಾಡಲಾಗುವುದು ಎಂದು ಅವರು ವಿವರಿಸಿದರು.
ಮರಾಟಿಗರ ಅಹವಾಲುಗಳನ್ನು ನಮ್ಮ ಸಮಾವೇಶದ ಗೌರವಾಧ್ಯಕ್ಷ ಡಾ.ಕೆ.ಸುಂದರ್ ನಾಯ್ಕ ಮುಖ್ಯಮಂತ್ರಿಗಳಿಗೆ ಅರ್ಪಿಸಲಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸಾಧಿಸಿರುವ ಸಾಧನೆಯನ್ನು ಪರಿಗಣಿಸಿ ಸಮಾಜದ ಆನೇಕ ಸಾಧಕರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು ಎಂದರು.
* ನ.9ರಂದು ಉದ್ಯೋಗ ಮೇಳ
ಕರ್ನಾಟಕ ಮರಾಟಿ ಸಂಘ ಬೆಂಗಳೂರು ಅವರ ಸಹಕಾರದಿಂದ ಮರಾಟಿಗರಿಗಾಗಿಯೇ ನ.9ರಂದು ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಈಗಾಗಲೇ 1,500ಕ್ಕೂ ಹೆಚ್ಚು ಮರಾಟಿ ಉದ್ಯೋಗಾಕಾಂಕ್ಷಿಗಳು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಸುಮಾರು 30 ಕ್ಕೂ ಹೆಚ್ಚು ವಿವಿಧ ಕಂಪೆನಿಗಳು ಈ ಸಮಾವೇಶದ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಬರುವ ದೂರದ ಊರಿನ ಮರಾಟ ಬಂಧುಗಳಿಗೆ ವಸತಿ ವ್ಯವಸ್ಥೆ ಮತ್ತು ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಎಂ. ಮೋಹನ್ ಆಳ್ವ, ಎನ್.ಎಸ್.ಮಂಜುನಾಥ್, ರತಿ ಪ್ರಭಾಕರ ನಾಯ್ಕ ಹಾಗೂ ಪ್ರವೀಣ್ ಕುಮಾರ್ ಮುಗುಳಿ ಸಹಕರಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಡಾ.ಕೆ.ಸುಂದರ್ ನಾಯಕ್, ರಾಮಚಂದ್ರ ಕೆಂಬಾರೆ, ರತ್ನಾವತಿ, ಎನ್.ವಿಶ್ವನಾಥ್ ನಾಯ್ಕ, ಮಹಾಲಿಂಗ ನಾಯ್ಕ, ಗೌತಮ್ ಉಪಸ್ಥಿತರಿದ್ದರು.