ಮಂಡ್ಯ ನಗರದಲ್ಲಿ ಮ್ಯಾರಥಾನ್ ಮೆರಗು: ಸ್ಪರ್ಧೆಯಲ್ಲಿ ಸಾವಿರಾರೂ ಜನರು ಭಾಗಿ

Marathon running Mandya
Published on

ಮಂಡ್ಯ: ನಶೆ ಮುಕ್ತ ಕರ್ನಾಟಕ, ಸಡೃಢ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದಲ್ಲಿ ಆಯೋಜಿಸಿದ್ದ ಮ್ಯಾರಥಾನ್ ಓಟಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.

ಐದು ಕಿ.ಮೀ.ಹಾಗೂ ಹತ್ತು ಕಿ.ಮೀ.ವಿಭಾಗದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಲು ಮಂಡ್ಯ ಮಾತ್ರವಲ್ಲದೆ ರಾಜ್ಯದ ಹಲವು ಜಿಲ್ಲೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಕೆಲವರು ಆನ್‌ಲೈನ್‌ನಲ್ಲಿಯೇ ನೋಂದಣಿ ಮಾಡಿಕೊಂಡಿದ್ದರು. ಅಂತೆಯೇ ಹಲವರು ಸ್ಥಳದಲ್ಲಿಯೇ ನೋಂದಣಿ ಮಾಡಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಂಡರು. ಸ್ಪರ್ಧೆಯಲ್ಲಿ ಭಾಗಿಯಾದ ಎಲ್ಲರಿಗೂ ಟಿ ಶರ್ಟ್ ವ್ಯವಸ್ಥೆ ಮಾಡಲಾಗಿತ್ತು. ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಓಟ ಎರಡು ಮಾರ್ಗದ ಮೂಲಕ ಸಾಗಿತು. ಸ್ಪರ್ಧೆಗೆ ಜಿಲ್ಲಾಮಟ್ಟದ ಅಧಿಕಾರಿಗಳು, ನಟ ರಿಷಿ ಮೆರಗು ನೀಡಿದರು. ಇದಲ್ಲದೆ ದಾರಿಯುದ್ದಕ್ಕೂ ಸಾರ್ವಜನಿಕರು ಚಪ್ಪಾಳೆ, ಶಿಳ್ಳೆ ಹೊಡೆಯುವ ಮೂಲಕ ಹುರಿದುಂಬಿಸಿದರು.

ಇದಕ್ಕೂ ಮೊದಲು ಸರ್‌ಎಂವಿ ಕ್ರೀಡಾಂಗಣದಲ್ಲಿ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಮ್ಯಾರಥಾನ್ ಓಟಕ್ಕೆ ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಕುಮಾರ, ಸಮಾಜದಲ್ಲಿ ಯಾವುದೇ ತೊಂದರೆಯಾಗದಂತೆ ಸಾರ್ವಜನಿಕರು ಶಾಂತಿ, ಸುಖದಿಂದ ಬದುಕಲು ಹಾಗೂ ನಿಶ್ಚಿಂತೆಯಿಂದ ನಿದ್ರೆ ಮಾಡಲು ಕಾರಣ ಪೊಲೀಸ್ ಇಲಾಖೆ. ಕರ್ನಾಟಕ ಪೊಲೀಸ್ ಇಲಾಖೆ ನೀಡಿರುವ ಸೇವೆಗಳು ಹೆಮ್ಮೆಯ ಸಂಗತಿ. ಶಿಸ್ತಿನ ಪ್ರತೀಕವಾಗಿ ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತದೆ. ಸಮಾಜದ ಸ್ವಾಸ್ಥ್ಯವನ್ನು ಪೊಲೀಸ್ ಇಲಾಖೆ ಕಾಪಾಡಿಕೊಂಡು ಬಂದಿರುವುದು ಶ್ಲಾಘನೀಯ, ನಾವೆಲ್ಲರೂ ಪೊಲೀಸ್ ಇಲಾಖೆಯ ಕಾರ್ಯವನ್ನು ಪ್ರಶಂಸಿಸಬೇಕು ಎಂದು ಹೇಳಿದರು.

ಮನಸ್ಸು ಮತ್ತು ದೇಹ ಆರೋಗ್ಯಕರವಾಗಿದ್ದರೆ ಸದೃಢವಾಗಿ ಕೆಲಸ ನಿರ್ವಹಿಸಬಹುದು. ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಂಡು ಸದೃಢರಾಗಲು ದೇಹವನ್ನು ದಂಡಿಸಬೇಕು, ಸಮಾಜಕ್ಕೆ ಉತ್ತಮ ಸೇವೆ ಒದಗಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ನಮ್ಮ ಆರೋಗ್ಯವಾಗಿರಬೇಕೆಂದರೆ ಪ್ರತಿಯೊಬ್ಬರೂ ಸದೃಢರಾಗಿ ಇರಬೇಕು. ಇದಕ್ಕೆ ದೇಹ ದಂಡಿಸಬೇಕು. ಪೊಲೀಸ್ ಇಲಾಖೆಯ ಸಿಬ್ಬಂದಿ ಇದನ್ನು ಸತತವಾಗಿ ಕಾಯ್ದುಕೊಳ್ಳಬೇಕು. ಮ್ಯಾರಥಾನ್ ಓಟದ ಮೂಲ ಉದ್ದೇಶ ನಶೆಮುಕ್ತ ಕರ್ನಾಟಕ ಅಭಿಯಾನ ಮಾಡುವುದು. ಹಾಗಾಗಿ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಎಂಬ ಘೋಷವಾಕ್ಯದಡಿ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ನಟ ರಿಷಿ, ಬಿಗ್‌ಬಾಸ್ ಖ್ಯಾತಿಯ ರಜತ್, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಇತರರಿದ್ದರು.

Marathon running Mandya

ಲಕ್ಷ್ಮೀಶ, ನಿತಿನ್‌ಕುಮಾರ್‌ಗೆ ಬಹುಮಾನ

10 ಕಿ.ಮೀ.ಓಟದ ಸ್ಪರ್ಧೆಯಲ್ಲಿ ಮೈಸೂರಿನ ಲಕ್ಷ್ಮೀಶ(ಪ್ರ), ಬೆಂಗಳೂರಿನ ಗೋವಿಂದರಾಜ್(ದ್ವಿ) ಮತ್ತು ಬೆಂಗಳೂರಿನ ಮಹೇಶ್ ಬಾಬು(ತೃ) ಸ್ಥಾನ ಪಡೆದರು. ಇವರಿಗೆ ಕ್ರಮವಾಗಿ 10 ಸಾವಿರ ರೂ., 5 ಸಾವಿರ ರೂ., 3 ಸಾವಿರ ರೂ.ನಗದು ಬಹುಮಾನ ನೀಡಲಾಯಿತು. 5 ಕಿ.ಮೀ.ಓಟ ಸ್ಪರ್ಧೆಯಲ್ಲಿ ಮಡಿಕೇರಿಯ ಎಂ.ನಿತಿನ್‌ಕುಮಾರ್(ಪ್ರ), ಬೆಂಗಳೂರಿನ ಮಲ್ಲಿಕಾರ್ಜುನ್(ದ್ವಿ) ಮತ್ತು ಬೆಂಗಳೂರಿನ ಪ್ರವೀಣ್(ತೃ) ಸ್ಥಾನ ಪಡೆದುಕೊಂಡರು. ಇವರಿಗೆ ಕ್ರಮವಾಗಿ 5 ಸಾವಿರ ರೂ, 3 ಸಾವಿರ ರೂ, 2 ಸಾವಿರ ರೂ. ನಗದು ಬಹುಮಾನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net