

ಕುಶಾಲನಗರ:
ಮಕ್ಕಳು ಕ್ರೀಡಾಚಟುವಟಿಗಳಲ್ಲಿ ಪಾಲ್ಗೊಳ್ಳುವಂತಾಗಲು ಪೋಷಕರ ಪ್ರೋತ್ಸಾಹ ಅಗತ್ಯ ಎಂದು ಕೊಡಗು ಎಜುಕೇಷನಲ್ ಮತ್ತು ಸೋಷಿಯಲ್ ಸರ್ವಿಸ್ ಟ್ರಸ್ಟ್ನ ಪ್ರಮುಖರಾದ ಮೇ.ಜ. ಕೊಡಂದೇರ ಅರ್ಜುನ್ ಮುತ್ತಣ್ಣ ಹೇಳಿದರು. ಟ್ರಸ್ಟ್ ವತಿಯಿಂದ ಭಾನುವಾರ ಕುಶಾಲನಗರದಲ್ಲಿ ಏರ್ಪಡಿಸಿದ್ದ 3ನೇ ವರ್ಷದ ಗುಡ್ಡಗಾಡು ಓಟದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸ್ಪರ್ಧೆಯನ್ನು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ಸಂಘಟಿಸಲು ತೀರ್ಮಾನಿಸಲಾಗಿದೆ. ಇನ್ನು ಮುಂದೆ ಪ್ರತಿ ವರ್ಷವೂ ವಾರ್ಷಿಕ ಕಾರ್ಯಕ್ರಮದಂತೆ ನಡೆಸಿಕೊಂಡು ಬರಲಾಗುವುದು. ಒಂದು ವರ್ಷದ ಮೊದಲೇ ಸ್ಪರ್ಧೆಯ ದಿನಾಂಕ ಪ್ರಕಟಿಸಲಾಗುವುದು. ಇದರಿಂದಾಗಿ ಸ್ಪರ್ಧಿಗಳಿಗೆ ಅಭ್ಯಾಸಕ್ಕೆ ಅನುಕೂಲ ಆಗುತ್ತದೆ. ಮುಂದಿನ ವರ್ಷದಿಂದ ಬಹುಮಾನದ ಮೊತ್ತ ಕೂಡ ಹೆಚ್ಚಿಸಲಾಗುವುದು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸುವಂತಾಗಲು ಯೋಜನೆ ರೂಪಿಸಲಾಗುವುದು ಎಂದರು.
ಕೊಡಗು ಎಜುಕೇಷನಲ್ ಮತ್ತು ಸೋಷಿಯಲ್ ಸರ್ವಿಸ್ ಟ್ರಸ್ಟ್ ಸಂಸ್ಥಾಪಕರಲ್ಲಿ ಒಬ್ಬರಾದ ಕ್ಯಾ. ಪಟ್ಟಡ ಕಾರ್ಯಪ್ಪ ಮಾತನಾಡಿ ಈ ಸ್ಪರ್ಧೆಯ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಸ್ಪರ್ಧಿಗಳ ಸಂಖ್ಯೆಯನ್ನೂ ಮಿತಿಗೊಳಿಸಲಾಯಿತು. ಇಲ್ಲದಿದ್ದರೆ ಇನ್ನೂ ಹೆಚ್ಚಿನ ಸ್ಪರ್ಧಿಗಳು ಬರುತ್ತಿದ್ದರು. ಭಾರತೀಯ ಸೇನೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿನವರನ್ನು ಸೇರಿಸುವ ಉದ್ದೇಶ ಇಟ್ಟುಕೊಂಡು ಈ ಸ್ಪರ್ಧೆ ನಡೆಸಲಾಗುತ್ತಿದೆ. ಸೇನೆಗೆ ಪ್ರತಿಭಾವಂತ ಅಭ್ಯರ್ಥಿಗಳು ಆಯ್ಕೆ ಆಗಬೇಕು. ಐಎಎಸ್, ಐಪಿಎಸ್‌ನಂಥ ಸ್ಪರ್ಧಾತ್ಮ ಪರೀಕ್ಷೆ ಬರೆಯುವವರಿಗೂ ಟ್ರಸ್ಟ್ ವತಿಯಿಂದ ಪ್ರೋತ್ಸಾಹ ನೀಡಲಾಗುವುದು. ಆಸಕ್ತರು ಸಂಪರ್ಕಿಸಬಹುದು ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಮಾತನಾಡಿ ಕೊಡಗಿನಲ್ಲಿ ಪ್ರತಿ ಊರಿನಲ್ಲೂ ಮಾಜಿ ಸೈನಿಕರು ಇದ್ದಾರೆ. ಇವರು ಸೇವೆಯಿಂದ ಬಂದ ನಂತರವೂ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಸ್ವಾಗತಾರ್ಹ. ಯುವಕರು ಸೇನೆಗೆ ಸೇರಲು ಕೂಡ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಮಂದಪAಡ ಸದಾ ಚಂಗಪ್ಪ, ಪ್ರಮುಖರಾದ ಮಾರ್ಚಂಡ ಗಣೇಶ್ ಪೊನ್ನಪ್ಪ,
ಪಂದ್ಯAಡ ಸೂರಜ್ ಮಾಚಯ್ಯ, ಬೊಪ್ಪಂಡ ಸುಬ್ರಮಣಿ, ಪಟ್ಟಡ ಧನು ಉತ್ತಯ್ಯ, ಹವಾಲ್ದಾರ್ ಅಮೆ ಜನಾರ್ದನ, ಮ್ಯಾರಾಥಾನ್ ಕ್ರೀಡಾಪಟು ಹೊಸೋಕ್ಲು ಚಿಣ್ಣಪ್ಪ, ಭಾರತ ಹ್ಯಾಂಡ್ ಬಾಲ್ ತಂಡದ ನಾಯಕ
ಗ್ರೀನ್ ಡಿ ಕುನ್ನಾ, ಮಹೇಂದ್ರ ಇದ್ದರು.
ಕೊಡಗು ಎಜುಕೇಷನಲ್ ಮತ್ತು ಸೋಷಿಯಲ್ ಸರ್ವಿಸ್ ಟ್ರಸ್ಟ್ ವತಿಯಿಂದ ಭಾನುವಾರ ಕುಶಾಲನಗರದಲ್ಲಿ ನಡೆದ ಗುಡ್ಡಗಾಡು ಓಟದ ಸ್ಪರ್ಧೆಯ ಎರಡೂ ವಿಭಾಗಗಳಲ್ಲಿ ಕೂಡಿಗೆ ಕ್ರೀಡಾ ಶಾಲೆ ವಿದ್ಯಾರ್ಥಿಗಳು ತಮ್ಮ ಪಾರಮ್ಯ ಪ್ರದರ್ಶಿಸಿದರು.
ಯುವಕರಿಗಾಗಿ ಏರ್ಪಡಿಸಿದ್ದ 7 ಕಿ.ಮಿ. ದೂರದ ಗುಡ್ಡಗಾಡು ಓಟದಲ್ಲಿ 23.38 ನಿಮಿಷದಲ್ಲಿ ನಿಗದಿತ ಗುರಿ ಪೂರೈಸಿದ ಕೂಡಿಗೆ ಕ್ರೀಡಾ ಶಾಲೆಯ ಪ್ರಕಾಶ್ ಬಿ. ಪ್ರಥಮ ಸ್ಥಾನ ಪಡೆದುಕೊಂಡು 10 ಸಾವಿರ ರೂ. ಮೊತ್ತದ ಬಹುಮಾನ ತಮ್ಮದಾಗಿಸಿಕೊಂಡರು. 23.39 ನಿಮಿಷ ತೆಗೆದುಕೊಂಡ ಉಜಿರೆ ಎಸ್‌ಡಿಎಂ ಕಾಲೇಜಿನ ಮಿತೇಶ್ ಸಿ.ಜಿ. ದ್ವಿತೀಯ ಸ್ಥಾನ ಗಳಿಸಿ 8 ಸಾವಿರ ರೂ. ಬಹುಮಾನ ಪಡೆದುಕೊಂಡರು. 23.43 ನಿಮಿಷದಲ್ಲಿ ಓಡಿದ ಕೂಡಿಗೆ ಕ್ರೀಡಾ ಶಾಲೆಯ ತೇಜಶ್ ಟಿ.ಡಿ. ತೃತೀಯ ಸ್ಥಾನದೊಂದಿಗೆ 6 ಸಾವಿರ ರೂ. ನಗದು ಗಳಿಸಿದರೆ, 23.46 ನಿಮಿಷದಲ್ಲಿ ಗುರಿ ಸೇರಿದ ಸಿದ್ದಾಪುರ ಗೇಟ್‌ನ ಹರ್ಷಿತ್ ಗೌಡ ಎಸ್.ಹೆಚ್. ನಾಲ್ಕನೇ ಸ್ಥಾನಕ್ಕೆ 4 ಸಾವಿರ ರೂ. ಹಾಗೂ 24.47 ನಿಮಿಷದಲ್ಲಿ ಓಡಿದ ಮಡಿಕೇರಿ ತಾಲೂಕು ಕುಂದಚೇರಿಯ ಕೃಷ್ಣ ಕೆ.ಎಲ್. 5ನೇ ಸ್ಥಾನದೊಂದಿಗೆ 3 ಸಾವಿರ ರೂ. ಬಹುಮಾನ ಪಡೆದುಕೊಂಡರು.
ಯುವತಿಯರಿಗೆ 4 ಕಿಮೀ ದೂರದ ಗುರಿ ನಿಗದಿಪಡಿಸಲಾಗಿತ್ತು. 23.32 ನಿಮಿಷದಲ್ಲಿ ನಿಗದಿತ ದೂರ ಕ್ರಮಿಸಿದ ಕೂಡಿಗೆ ಕ್ರೀಡಾ ಶಾಲೆಯ ಗಾಯತ್ರಿ ಪ್ರಥಮ ಸ್ಥಾನದೊಂದಿಗೆ 6 ಸಾವಿರ ರೂ. ನಗದು ಗೌರವಕ್ಕೆ ಪಾತ್ರರಾದರು. 24.14 ನಿಮಿಷದಲ್ಲಿ ಓಡಿದ ಇದೇ ಶಾಲೆಯ ಸಂತೋಷಿ ದ್ವಿತೀಯ ಸ್ಥಾನ ಪಡೆದುಕೊಂಡು 5 ಸಾವಿರ ರೂ. ಬಹುಮಾನ ಪಡೆದುಕೊಂಡರು. 24.48 ನಿಮಿಷದ ತೆಗೆದುಕೊಂಡ ರಾಣಿ ತೃತೀಯ ಗಳಿಸಿ 4 ಸಾವಿರ ನಗದು ಬಹುಮಾನ ಗಳಿಸಿದರು. 24.99 ನಿಮಿಷದಲ್ಲಿ ಓಡಿದ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಚೈತ್ರಾ ಟಿ.ಪಿ. ನಾಲ್ಕನೇ ಸ್ಥಾನದೊಂದಿಗೆ 3 ಸಾವಿರ ರೂ. ಹಾಗೂ 26.03 ನಿಮಿಷದಲ್ಲಿ ಗುರಿ ಸೇರಿದ ಕಟ್ಟೆಮಾಡುವಿನ ಕಟ್ಟೆಮನೆ ಪ್ರಕೃತಿಬೋಪಯ್ಯ 5ನೇ ಸ್ಥಾನ ಪಡೆದುಕೊಂಡು 2 ಸಾವಿರ ರೂ. ನಗದು ಬಹುಮಾನ ಗಳಿಸಿದರು.