ಮರಾಠಿ ನಾಮಫಲಕಗಳಿಗೆ ಮಸಿ

12Jaggu4_Web
ಮರಾಠಿ-ಕನ್ನಡ ನಾಮಲಕಗಳಿಗೆ ಮಸಿ ಬಳಿದ ಘಟನೆಗೆ ಸಂಬಂಧಿಸಿ ಬೆಳಗಾವಿ ನಗರದ ರಾಮಲಿಂಗಖಿಂಡ್ ಗಲ್ಲಿಯಲ್ಲಿ ಕರವೇ ಹಾಗೂ ಶಿವಸೇನೆ ಮುಖಂಡರ ಮಧ್ಯೆ ವಾಗ್ವಾದ ನಡೆಯಿತು.
Published on

ಬೆಳಗಾವಿ: ಮಹಾರಾಷ್ಟ್ರದಲ್ಲಿ ಕನ್ನಡ ನಾಮಫಲಕಗಳಿಗೆ ಕಪ್ಪು ಮಸಿ ಬಳಿದು ಗುರುವಾರ ಪುಂಡಾಟ ಪ್ರದರ್ಶಿಸಿದ್ದ ಶಿವಸೇನೆ ಕಾರ್ಯಕರ್ತರಿಗೆ ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಿರುಗೇಟು ನೀಡಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದ ಹೋಟೆಲ್‌ಗಳ ಮರಾಠಿ ನಾಮಫಲಕಗಳಿಗೆ ಶುಕ್ರವಾರ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.

ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಕಪ್ಪು ಮಸಿ ಬಳಿಯಲಾಯಿತು. ಮರಾಠಿ ನಾಮಫಲಕ ಹಾಕದಂತೆ ಹೋಟೆಲ್ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಗಾಂವ್ಕರಿ, ಕಾವೇರಿ ಹೋಟೆಲ್‌ಗಳ ಮರಾಠಿ ನಾಮಫಲಕಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು.

ಕರವೇ-ಶಿವಸೇನಾ ವಾಗ್ವಾದ: ಘಟನೆಗೆ ಸಂಬಂಧಿಸಿದಂತೆ ಬೆಳಗಾವಿಯ ರಾಮಲಿಂಗ ಖಿಂಡ್ ಗಲ್ಲಿಯಲ್ಲಿ ಕರವೇ ಮುಖಂಡರು ಹಾಗೂ ಶಿವಸೇನಾ ಮುಖಂಡರ ಮಧ್ಯೆ ವಾಗ್ವಾದ ನಡೆಯಿತು. ಕರವೇ ಸಂಚಾಲಕ ಮಹಾದೇವ ತಳವಾರ, ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಕಾರ್ಯಕರ್ತರಾದ ಗಣೇಶ ರೋಕಡೆ, ಬಸವರಾಜ ಅವರಳ್ಳಿ, ನಿಂಗರಾಜ ಗುಂಡ್ಯಾಗೋಳ ಇತರರು ಶಿವಸೇನಾ ಮುಖಂಡ ಪ್ರಕಾಶ ಶಿರೋಳಕರ ಅವರ ಕಾರಿನ ಮುಂಭಾಗದಲ್ಲಿದ್ದ ಮರಾಠಿ ಬೋರ್ಡ್ ಹಾಗೂ ನಂಬರ್ ಪ್ಲೇಟ್ ಕಿತ್ತು ಹಾಕಿದರು. ಅಲ್ಲದೆ, ಶಿವಸೇನೆ ಕಚೇರಿಗೂ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಎರಡೂ ಸಂಘಟನೆಗಳ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಉಭಯ ಸಂಘಟನೆಗಳ ಮುಖಂಡರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ದಿಢೀರ್ ಪ್ರತಿಭಟನೆ: ಬೆಳಗಾವಿ ನಗರದ ಸಂಭಾಜಿ ವೃತ್ತದಲ್ಲಿ ಶಿವಸೇನೆ, ಎಂಇಎಸ್ ಕಾರ್ಯಕರ್ತರು ಕರವೇ ವರ್ತನೆ ಖಂಡಿಸಿ ದಿಢೀರ್ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಡಿಸಿಪಿ ವಿಕ್ರಂ ಆಮ್ಟೆ, ಪ್ರತಿಭಟನಾಕಾರರ ಮನವೊಲಿಕೆಗೆ ಮುಂದಾದರು. ಈ ವೇಳೆ ಕರವೇ ಕಾರ್ಯಕರ್ತರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸುವಂತೆ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರು ಪಟ್ಟುಹಿಡಿದರು. ಪ್ರತಿಭಟನೆ ಕೈಬಿಡುವಂತೆ ಡಿಸಿಪಿ ತಿಳಿಸಿದರು. ಬಳಿಕ ಸ್ವಲ್ಪ ಸಮಯದ ನಂತರ ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net