ರಾಜ್ಯದ ಮರಾಠಿಗರು ಕನ್ನಡ ಪ್ರೇಮಿಗಳು; ಗಡಿಯಲ್ಲಿ ಪುಂಡಾಟ ಮಾಡುವವರಿಗೂ ನಮಗೂ ಸಂಬಂಧವಿಲ್ಲ

24 HHR P 05
ಮೈದೊಳಲಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವರೂಢ ಪ್ರತಿಮೆಯ ರಾಜಬೀದಿ ಉತ್ಸವಕ್ಕೆ ಲೋಕೇಶ ರಾವ್ ದೊಂಬಾಳೆ ಚಾಲನೆ ನೀಡಿದರು. ಚಂದ್ರಪ್ಪ, ಬಿ.ನಾಗಪ್ಪ ಇತರರಿದ್ದರು.
Published on

ಹೊಳೆಹೊನ್ನೂರು: ರಾಜ್ಯದ ಮರಾಠಿಗರು ಕನ್ನಡ ಭಾಷಾ ಪ್ರೇಮಿಗಳು, ಸಹೃದಯಿಗಳು ಎಂದು ಭದ್ರಾವತಿ ಮರಾಠ ಸಮಾಜದ ಅಧ್ಯಕ್ಷ ವಕೀಲ ಲೋಕೇಶ ರಾವ್ ದೊಂಬಾಳೆ ಹೇಳಿದರು.

ಸಮೀಪದ ಮೈದೊಳಲಿನಲ್ಲಿ ಶನಿವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 397ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ ಅಶ್ವರೂಢ ಪ್ರತಿಮೆಯ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದ ಬಹುತೇಕ ಮರಾಠಿಗರು ಕನ್ನಡವನ್ನೇ ಮಾತೃಭಾಷೆಯಾಗಿ ಬಳಸುತ್ತಿರುವುದು ಆಶಾದಾಯಕ ಬೆಳವಣಿಗೆ. ಗಡಿಯಲ್ಲಿ ಯಾರೋ ಪುಂಡಾಟ ನಡೆಸುತ್ತಾರೆ, ಅವರಿಗೂ ರಾಜ್ಯದ ಮರಾಠಿಗರಿಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ. ಮರಾಠಿಗರು ಅನ್ಯ ಧರ್ಮೀಯರೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜ್ಯದಲ್ಲಿ ಸಹಬಾಳ್ವೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಸಣ್ಣಪುಟ್ಟ ವೈಮನಸ್ಸುಗಳನ್ನು ಮರೆತು ಸಮಾಜ ಭಾಂದವರು ಒಗ್ಗಟಾಗಬೇಕಿದೆ. ಮುಂದಿನ ಪೀಳಿಗೆಗೆ ಸದೃಢ ಸಮಾಜವನ್ನು ಕೊಡುಗೆಯಾಗಿ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಹುಮುಖ್ಯವಾಗಿ ಯುವಕರು ಸಮಾಜದ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಭಾಗವಹಿಸಬೇಕು. ವ್ಯಕ್ತಿಗೆ ಸಮಾಜದ ಅವಶ್ಯಕತೆ ಇದೆ, ಸಮಾಜ ಬಿಟ್ಟು ಬಾಳುವುದು ಅಸಾಧ್ಯ. ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಕೊಂಡು ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದರು.
ಮಹಿಳೆಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಯಾರೊಬ್ಬರೂ ತಮ್ಮ ತನವನ್ನು ಮರೆತು ಬಾಳಬಾರದು. ಸಮಾಜಮುಖಿ ಕಾರ್ಯಗಳಿಗೆ ಕೈಲಾದಷ್ಟು ಸಹಕಾರ ನೀಡುವುದನ್ನು ಎಂದಿಗೂ ಮರೆಯಬಾರದು. ಪ್ರತಿಯೊಬ್ಬ ತಾಯಿಯೂ ಜೀಜಾಮಾತೆಯಂತೆ ತಮ್ಮ ಮಕ್ಕಳನ್ನು ಧರ್ಮ ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳುವಂತೆ ಪ್ರೇರಣೆ ನೀಡಬೇಕು. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮರಾಠ ಅಭಿವೃದ್ಧಿ ನಿಗಮದ ಯೋಜನೆಗಳ ಲಾಭಗಳು ಪ್ರತಿಯೊಂದು ಕುಟುಂಬಕ್ಕೂ ಕಲ್ಪಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಗ್ರಾಮ ಸಮಿತಿ ಅಧ್ಯಕ್ಷ ಚಂದ್ರಪ್ಪ, ಗ್ರಾಪಂ ಉಪಾಧ್ಯಕ್ಷೆ ವಿನೋದಮ್ಮ, ತಾಪಂ ಮಾಜಿ ಸದಸ್ಯ ಈಶ್ವರ ರಾವ್, ಪ್ರಮುಖರಾದ ಬಿ.ನಾಗಪ್ಪ, ರಾಮ್, ಶ್ರೀನಿವಾಸ್ ಬಂಡ್ಗಾರ್, ಶಿವಾಜಿ ರಾವ್, ಹಾಲೋಜಿ ರಾವ್, ಶೇಖರರಾವ್, ಯಲ್ಲೋಜಿ ರಾವ್, ಮಹಾದೇವ ರಾವ್, ಕೆ.ಟಿ.ಬಸವರಾಜ್ ರಾವ್, ಚಂದ್ರೋಜಿ ರಾವ್, ವಚನ್ ಮೋರೆ, ರಾಜಶೇಖರ್, ಚಂದನ್, ನಾಗರಾಜ್, ಕಿರಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net