ಮಾನಸಿಕ ಆರೋಗ್ಯಕ್ಕಾಗಿ ಮ್ಯಾರಾಥಾನ್, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಆಯೋಜನೆ

IMG_20241027_195614_596.jpg
Published on

ಹುಬ್ಬಳ್ಳಿ: ಮಾನಸಿಕ ಆರೋಗ್ಯಕ್ಕಾಗಿ ಓಟ ಎಂಬ ಧ್ಯೇಯದೊಂದಿಗೆ ಭಾನುವಾರ ನಗರದ ಕಿಮ್ಸನಲ್ಲಿ ಮ್ಯಾರಾಥಾನ್ ಆಯೋಜಿಸಲಾಗಿತ್ತು.

ಸಿಐಐ ಯಂಗ್ ಇಂಡಿಯನ್ಸ್, ಕರ್ನಾಟಕ ವೈದ್ಯಕಿಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ, ಭಾರತೀಯ ಮನೋವೈದ್ಯಕಿಯ ಸಂಘ ಕರ್ನಾಟಕ ಶಾಖೆ ಹಾಗೂ ಆಂತರ್ಯ ನರ ಹಾಗೂ ಮನೋರೋಗ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಿಮ್ಸ್ ಬಳಿ ಮ್ಯಾರಾಥಾನ್ ಗೆ ಚಾಲನೆ ನೀಡಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ದೈಹಿಕ ಆರೋಗ್ಯದಷ್ಟೆ ಮಾನಸಿಕ ಆರೋಗ್ಯವೂ ಮುಖ್ಯ. ಇತ್ತೀಚೆಗೆ ಮಾನಸಿಕ ಒತ್ತಡ ಹಾಗೂ ಕಾಯಿಲೆಗಳು ಹೆಚ್ಚುತ್ತಿವೆ. ಇದರಿಂದ ದುಶ್ಚಟಗಳು, ಆತ್ಮಹತ್ಯೆಗಳು, ಅಪರಾಧಗಳು ಹೆಚ್ಚುತ್ತಿವೆ. ಮಾನಸಿಕ ಆರೋಗ್ಯಕ್ಕಾಗಿ ಜನ ಮನೋವೈದ್ಯರನ್ನು ಕಾಣಲು ಹಿಂಜರಿಯುತ್ತಾರೆ.

ನಮ್ಮ ಹತ್ತಿರದವರೊಡನೆ ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಚರ್ಚಿಸಿದರೆ ಅನೇಕ ಸಮಸ್ಯೆಗಳನ್ನು ಬಗೆ ಹರಿಸಬಹುದು. ಈ ನಿಟ್ಟಿನಲ್ಲಿ ಸಮಾಜದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಎಂಸಿಆರ್ ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಸರ್ವತೋಮುಖ ಬೆಳವಣಿಗೆಗೆ ಮಾನಸಿಕ ಆರೋಗ್ಯ ಮಹತ್ವದ್ದು ಎಂದರು.

ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳಿಂದ ಸುಮಾರು 650ಕ್ಕೂ ಹೆಚ್ಚು ಸ್ಪಧಿರ್ಗಳು ಭಾಗವಹಿಸಿ, 2 ಮತ್ತು 5ಕಿ.ಮೀ ವಿಭಾಗದಲ್ಲಿ ಓಡಿದರು.

ಕೆಎಂಸಿಆರ್ ಐ ಪ್ರಾಂಶುಪಾಲ ಡಾ. ಗುರುಶಾಂತಪ್ಪ ಯಲಗಚ್ಚಿನ, ಭಾರತೀಯ ಮನೋವೈದ್ಯಕಿಯ ಸಂಘ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ. ಸೋಮಶೇಖರ ಬಿಜ್ಜಳ, ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಸಿ, ಸಿಐಐ ಯಂಗ್ ಇಂಡಿಯನ್ಸ್ ಹುಬ್ಬಳ್ಳಿ ಪ್ರಮುಖ ಡಾ. ನಾಗರಾಜ ನಾಯ್ಕ್, ರಾಹುಲ್ ಸುರಾನಾ, ಡಾ. ಸಮೀರ್ ಮಂಗಳವೇಡೆ, ಆಂತರ್ಯ ನರ ಹಾಗೂ ಮನೋರೋಗ ಸಂಸ್ಥೆಯ ಡಾ. ಶಿವಾನಂದ ಹಿರೇಮಠ ಹಾಗೂ ಡಾ. ಚೈತ್ರ, ಹುಬ್ಬಳ್ಳಿ ಫಿಟ್ ನೆಸ್ ಕ್ಲಬ್ ಸದಸ್ಯರು, ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.

ಓಟವು ಕೆಎಂಸಿಆರ್ ಐ ಕಾಲೇಜಿನ ಮುಂಭಾಗದಿಂದ ಆರಂಭವಾಗಿ ಶಿರೂರ ಪಾರ್ಕ್ ಟೆಂಡರ್ ಶ್ಯೂರ್ ರಸ್ತೆ ಮುಖಾಂತರ ಚಲಿಸಿ, ಹೊಸೂರ್ -ಉಣಕಲ್ ರಸ್ತೆಯ ಜಂಕ್ಷನ್ ವರೆಗೆ ಸಾಗಿ ಮರಳಿ ಕೆ ಎಂಸಿಆರ್ ಐ ನಲ್ಲಿ ಮುಕ್ತಾಯಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net