ಮರಾಠಾ ಸಮುದಾಯದಿಂದ ಪ್ರತಿಭಟನೆ

30 Jaggu 2-Web
ಸಾಮಾಜಿಕ ಜಾಲತಾಣದಲ್ಲಿ ಶಿವಾಜಿ ಮಹಾರಾಜರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮರಾಠಾ ಸಮುದಾಯದ ಮುಖಂಡರು ಭಾನುವಾರ ಬೆಳಗಾವಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಎದುರು ಪ್ರತಿಭಟಿಸಿದರು.
Published on

ಬೆಳಗಾವಿ: ಸಾಮಾಜಿಕ ಜಾಲತಾಣದಲ್ಲಿ ಶಿವಾಜಿ ಮಹಾರಾಜರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮರಾಠಾ ಸಮುದಾಯದ ಮುಖಂಡರು ಬೆಳಗಾವಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಬಳಿ ಭಾನುವಾರ ಪ್ರತಿಭಟಿಸಿದರು. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ಸದ್ಯ ಸುಖಾಂತ್ಯವಾಗಿದೆ. ರಾಯಣ್ಣ ಮತ್ತು ಶಿವಾಜಿ ನಮ್ಮ ದೇಶದ ಆಸ್ತಿ ಎಂದು ಗ್ರಾಮಸ್ಥರೇ ವಿವಾದ ಇತ್ಯರ್ಥಗೊಳಿಸಿದ್ದಾರೆ. ಆದರೆ, ಕೆಲ ಕಿಡಿಗೇಡಿಗಳು ರಾಯಣ್ಣ ಮತ್ತು ಶಿವಾಜಿ ಮಹಾರಾಜರ ಅನುಯಾಯಿಗಳ ನಡುವೆ ಮತ್ತೆ ವಿವಾದದ ಕಿಚ್ಚು ಹೊತ್ತಿಸುವ ಯತ್ನ ಮಾಡುತ್ತಿದ್ದಾರೆ. ‘ವಲಸಿಗರನ್ನು ಓಡಿಸಿ ಕರ್ನಾಟಕ ಉಳಿಸಿ’ ಎಂದು ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಅಲ್ಲದೆ, ‘ಬ್ರಿಟಿಷರ ಹೆಡೆಮುರಿ ಕಟ್ಟಿದ ವೀರ ಯಾರು?’ ಎಂದು ಪ್ರಶ್ನಿಸುವ ಮೂಲಕ ಶಿವಾಜಿ ಮಹಾರಾಜರಿಗೆ ಅವಮಾನ ಮಾಡುವ ರೀತಿಯಲ್ಲೂ ಪೋಸ್ಟ್ ಹಾಕಲಾಗುತ್ತಿದೆ. ಇಂತಹ ಕೃತ್ಯ ಎಸಗಿದವರನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸ್ ಕಮಿಷನರ್ ಡಾ. ಕೆ.ತ್ಯಾಗರಾಜನ್, ಪ್ರತಿಭಟನಾಕಾ ರರಿಂದ ಅಹವಾಲು ಸ್ವೀಕರಿಸಿದರು. ನಂತರ ಮಾತನಾಡಿ ತಪ್ಪಿತಸ್ಥರು ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು. ಅವಹೇಳನಕಾರಿ ಪೋಸ್ಟ್ ಮಾಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಬೆಳಗಾವಿ ಗ್ರಾಮೀಣ ಹಾಗೂ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿಯೂ ಇದೇ ವಿಚಾರವಾಗಿ ಪ್ರತ್ಯೇಕ ದೂರು ದಾಖಲಿಸಲಾಗಿದೆ.

ಪೀರನವಾಡಿಯಲ್ಲಿ ಹೆಚ್ಚಿದ ಪೊಲೀಸ್ ಭದ್ರತೆ

‘ವಲಸಿಗರನ್ನು ಓಡಿಸಿ ಕರ್ನಾಟಕ ಉಳಿಸಿ’ ಎಂದು ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಹಾಕಿರುವ ಕೆಲ ಕಿಡಿಗೇಡಿಗಳ ಕೃತ್ಯದಿಂದ ಪೀರನವಾಡಿ ಗ್ರಾಮದಲ್ಲಿ
ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಸಂಭವನೀಯ ಸಂಘರ್ಷ ತಪ್ಪಿಸಲು ಪೀರನವಾಡಿಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮೂರ್ತಿಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಇಬ್ಬರು ಪಿಎಸ್‌ಐ, 2 ಕೆಎಸ್‌ಆರ್‌ಪಿ ತುಕಡಿ, 1 ಡಿಆರ್ ತುಕಡಿ ಸೇರಿ ನೂರಾರು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net