ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆಕ್ರೋಶ

Protest 1
Published on

ಮಂಡ್ಯ: ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡ ಪರ ಸಂಘಟನೆಗಳ ಒಕ್ಕೂಟ) ಕಾರ್ಯಕರ್ತರು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಯಾರೊಬ್ಬರೂ ಬೇಡಿಕೆ ಇಡದಿದ್ದರೂ ಪ್ರಾಧಿಕಾರ ರಚಿಸಿ 50 ಕೋಟಿ ರೂ ಅನುದಾನ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರ ನಾಚಿಕೆಗೇಡಿನ ಸಂಗತಿ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳ ಸ್ವಾರ್ಥ ಮತ್ತು ಅಧಿಕಾರದ ದಾಹದಿಂದಾಗಿ ಕನ್ನಡಿಗರ ಪರಿಸ್ಥಿತಿ ದಿನದಿಂದ ದಿನಕ್ಕೆ ಶೋಚನೀಯವಾಗುತ್ತಿದೆ. ಹಲವು ಕಾರ್ಖಾನೆಗಳು ಮುಲಾಜಿಲ್ಲದೆ ಕನ್ನಡಿಗರನ್ನು ಕೆಲಸದಿಂದ ತೆಗೆದುಹಾಕುತ್ತಿವೆ. ಕನ್ನಡ ಶಾಲೆ ಬಾಗಿಲು ಮುಚ್ಚಲಾರಂಭಿಸಿವೆ. ಇದಲ್ಲದೆ ಮರಾಠಿಗರು ಪುಂಡಾಟಿಕೆ ಮಾಡುವುದು, ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕನ್ನಡಿಗರಿಗೆ ಅನುಕೂಲವಾಗುವ ಸರೋಜಿನಿ ಮಹಿಷಿ ವರದಿ, ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಆಸಕ್ತಿ ಇಲ್ಲ. ಮರಾಠರ ಪ್ರಾಧಿಕಾರ ರಚಿಸಿರುವುದು ಖಂಡನಾರ್ಹ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೈಷುಗರ್ ಕಾರ್ಖಾನೆ ಆರಂಭಿಸುವುದಾಗಿ ಹೇಳಿದ್ದ ಬಿಎಸ್‌ವೈ ಮಾತು ಹುಸಿಯಾಗಿದೆ. ನಾಲ್ವಡಿ ಮತ್ತು ಕುವೆಂಪು ಪ್ರತಿಮೆ ಸ್ಥಾಪನೆಗೆ ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಮುಂದಿನ ದಿನಗಳಲ್ಲಿ ಮತಬ್ಯಾಂಕ್‌ಗಾಗಿ ಇನ್ನೊಂದಿಷ್ಟು ಸಮುದಾಯದ ಪ್ರಾಧಿಕಾರ ರಚನೆಯಾದರೂ ಆಶ್ಚರ್ಯವಿಲ್ಲ. ತಕ್ಷಣವೇ ಇಂತಹ ನಿರ್ಧಾರವನ್ನು ನಿಲ್ಲಿಸಬೇಕು. ಕಷ್ಟದಲ್ಲಿರುವ ರೈತರು ಹಾಗೂ ರೈತರ ಕಲ್ಯಾಣಕ್ಕೆ ಅನುದಾನ ನೀಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎಚ್.ಡಿ.ಜಯರಾಮು, ಟಿ.ಕೆ.ಸೋಮಶೇಖರ್, ಜೋಸೆಫ್, ಕೃಷ್ಣೇಗೌಡ, ಬಸವರಾಜು, ಸತೀಶ್, ರಮೇಶ್, ಶಂಕರ್, ಶಿವರಾಜಚಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net