ಮರಾಠ ಪ್ರಾಧಿಕಾರ ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ

18_11_Mdy_Protest
Published on

ಮಂಡ್ಯ: ಬೆಳಗಾವಿ ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಮರಾಠ ಸಮುದಾಯದ ಮತ ಸೆಳೆಯುವ ಉದ್ದೇಶದಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿ 50 ಕೋಟಿ ರೂ ಅನುದಾನ ನೀಡಿರುವ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಕದಂಬ ಸೈನ್ಯ ಸಂಘಟನೆ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ರವಾನಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಕನ್ನಡಿಗರ ಮೇಲೆ ಎಂಇಎಸ್, ಶಿವಸೇನೆ ಪುಂಡಾಟಿಕೆ ಹಾಗೂ ದೌರ್ಜನ್ಯ ಹೆಚ್ಚಾಗಿರುವಾಗಲೇ ಮರಾಠ ಪ್ರಾಧಿಕಾರ ರಚನೆ ಮಾಡಲಾಗಿದೆ. ಮರಾಠಿಗರ ನಾಯಕರು, ಕನ್ನಡಿಗರು ನಮ್ಮ ಪ್ರಾಧಿಕಾರದ ವಿಚಾರಕ್ಕೆ ಬಂದರೆ ಬಟ್ಟೆ ಕಳಚುತ್ತೇವೆ ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಅಲ್ಲದೆ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ಇದ್ದು, ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕದಲ್ಲೇ ಕನ್ನಡಿಗರನ್ನು ಪರಕೀಯರನ್ನಾಗಿ ಮಾಡುವ ಸಂಚು ರೂಪಿಸಲಾಗುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ ಬಿಡುಗಡೆ ಮಾಡಿ ಮರಾಠ ಪ್ರಾಧಿಕಾರಕ್ಕೆ 50 ಕೋಟಿ ರೂ ಬಿಡುಗಡೆ ಮಾಡಿರುವುದು ಸರ್ಕಾರದ ದೌರ್ಬಲ್ಯ ಎದ್ದು ಕಾಣುತ್ತದೆ. ಯಾವುದೇ ಸರ್ಕಾರಗಳು ಕನ್ನಡ ಭಾಷೆಯ ವಿರೋಧಿಯಾಗಿರುವುದಿಲ್ಲ. ಪಕ್ಷಾತೀತವಾಗಿ ಕನ್ನಡಿಗರು ಪ್ರತಿಭಟಿಸಿ ಕನ್ನಡ ತನ ಮೆರೆಯಲಿ, ಮಂತ್ರಿಗಳು, ಶಾಸಕರು ಪ್ರಾಧಿಕಾರ ಹಿಂಪಡೆಯುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ರಾಜ್ಯ ಸಂಚಾಲಕ ಎಸ್.ಶಿವಕುಮಾರ್, ಉಮ್ಮಡಹಳ್ಳಿ ನಾಗೇಶ್, ಭಗವಾನ್, ಕೆ.ಸಿ.ಯೋಗೇಶ್, ಅರಸು ಸಂಘದ ಅಧ್ಯಕ್ಷ ಹನುಮಂತು, ಕರ್ನಾಟಕ ರಕ್ಷಣಾ ದಳದ ಯುವ ಘಟಕದ ರಾಜ್ಯಾಧ್ಯಕ್ಷ ಎಂ. ಲೋಕೇಶ್, ಸುನೀಲ್‌ಕುಮಾರ್, ಕದಸಂಸದ ಉಮೇಶ್, ಹರಿಕುಮಾರ್, ರಮೇಶ್, ಸ್ವಾಮಿ, ಗೋವಿಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net