

ಮಡಿಕೇರಿ:
ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘ ಅಂಬಾ ಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನ ಸಂಘ ಹಾಗೂ ಮಹಿಳಾ ವೇದಿಕೆ ತಾಳತ್ತಮನೆ ಇದರ ೨೭ನೇ ವಾರ್ಷಿಕ ಮಹಾಸಭೆ ಸಂಘದ ನಿವೇಶನದಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಸಹಾಯಕ ಔಷಧಿ ನಿಯಂತ್ರಕ ಶಂಕರ್ ನಾಯ್ಕ, ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಕುಟುಂಬ ಸದಸ್ಯರೊಂದಿಗೆ ಸಾಮರಸ್ಯದಿಂದ ಬದುಕುವುದನ್ನು ತಿಳಿ ಹೇಳಿ ಕೊಡಬೇಕೆಂದು ಮನವಿ ಮಾಡಿದರಲ್ಲದೇ, ಸಂಘದ ಕಟ್ಟಡ ಕೆಲಸ ಸಮಾಜ ಬಾಂಧವರ ಸಹಕಾರದಿಂದ ಸಂಪೂರ್ಣಗೊಳ್ಳಲೆಂದು ಆಶಿಸಿದರು.
ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಬು ನಾಯ್ಕ ಮಾತನಾಡಿ, ಸಂಘದ ಸಂಘಟನೆಗಾಗಿ ಪ್ರತಿಯೊಬ್ಬರು ಶ್ರಮವಹಿಸಿ ಕಾರ್ಯನಿರ್ವಹಿಸುವ ಮೂಲಕ ಸಂಘದ ಚಟುವಟಿಕೆಗಳ ಬಗ್ಗೆ ಗ್ರಾಮೀಣ ಭಾಗದ ಸಮುದಾಯದ ಮಂದಿಗೆ ತಿಳಿಸಿ ಕೊಡಬೇಕು ಹಾಗೂ ಜನಾಂಗ ಬಾಂಧವರ ಏಳಿಗೆಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ವರ ಮಹಾಸಭೆಗೆ ಸಮಾಜ ಬಾಂಧವರ ಹಾಜರಾತಿ ಕಡಿಮೆ ಇದ್ದ ಬಗ್ಗೆ ಬೇಸರ ವ್ಯಕ್ತಪಡಿಸಿ, ಸಮಾಜ ಬಾಂಧವರು ಸಂಘದ ಮೇಲಿನ ತಾತ್ಸಾರ ಮನೋಭಾವವನ್ನು ಬಿಟ್ಟು ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಬಂದು ಭಾಗವಹಿಸಬೇಕೆಂದು ಮನವಿ ಮಾಡಿದರು.
ಕಟ್ಟಡ ಸಮಿತಿ ಅಧ್ಯಕ್ಷ ಎಂ.ಟಿ. ಗುರುವಪ್ಪ, ಕೊಡಗು ಜಿಲ್ಲಾ ಮರಾಠ, ಮರಾಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷೆ ಜಿ.ಆರ್. ದೇವಕಿ, ಮಡಿಕೇರಿ ಮಹಿಳಾ ವೇದಿಕೆ ಅಧ್ಯಕ್ಷೆ ರತ್ನಮಂಜರಿ ನರಸಿಂಹ, ಕಾರ್ಯದರ್ಶಿ ಎಂ.ಟಿ. ಪವನ್ ಕುಮಾರ್, ಸಹ ಕಾರ್ಯದರ್ಶಿ ಎ.ಎಂ. ನರಸಿಂಹ, ಕಾನೂರು ಯುವ ವೇದಿಕೆ ಅಧ್ಯಕ್ಷ ಎಂ.ಆರ್. ಮೋಹನ ಉಪಸ್ಥಿತರಿದ್ದರು.
ಮೃತಪಟ್ಟ ಸಂಘದ ಸದಸ್ಯರಿಗೆ ಹಾಗೂ ಸಮಾಜ ಬಾಂಧವರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ನಂತರ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಪದಾಧಿಕಾರಿಗಳ ಆಯ್ಕೆ: ಸಭೆಯಲ್ಲಿ ೨೦೨೩-೨೪ನೇ ಸಾಲಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷರಾಗಿ ಎಂ.ಎಂ. ಪರಮೇಶ್ವರ, ಉಪಾಧ್ಯಕ್ಷರಾಗಿ ಎಂ.ಎಂ.ದೇವಕಿ ಜಿ ರಾಮಣ್ಣ, ಕಾರ್ಯದರ್ಶಿಯಾಗಿ ಎಂ.ಟಿ. ಪವನ್, ಸಹ ಕಾರ್ಯದರ್ಶಿಯಾಗಿ ಎ.ಎಂ. ನರಸಿಂಹ, ಕೋಶಾಧಿಕಾರಿಯಾಗಿ ಎಂ.ಎಸ್. ಕ್ರಾಂತಿ ಅವರನ್ನು ಆಯ್ಲೆ ಮಾಡಲಾಯಿತು.
ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನ ಸಂಘದ ಅಧ್ಯಕ್ಷರಾಗಿ ಎಂ.ಆರ್.ಮೋಹನ, ಉಪಾಧ್ಯಕ್ಷರಾಗಿ ಕೆ.ಜಿ.ಶಶಿಕಾಂತ್, ಕಾರ್ಯದರ್ಶಿಯಾಗಿ ಎಂ.ಕೆ.ಸಂತೋಷ್ ಕಟ್ಟೆಮಾಡು, ಸಹ ಕಾರ್ಯದರ್ಶಿಯಾಗಿ ಡಿ.ಪಿ.ವಿನಯ್ ಕುಮಾರ್, ಕೋಶಾಧಿಕಾರಿಯಾಗಿ ಎಂ.ಆರ್.ಭುವನೇಶ್ ಆಯ್ಕೆಯಾದರು.