

ಮಂಡ್ಯ: ಮಾರಮ್ಮನ ಪ್ರಸಾದ ಸೇವಿಸಿ 70ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ಲಿಂಗಪಟ್ಟಣದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಲಿಂಗಪಟ್ಟಣ ಗ್ರಾಮದಲ್ಲಿ ಮಾರಮ್ಮನ ಪೂಜೆ ನೆರವೇರಿಸಲಾಗಿತ್ತು. ಇದಾದ ಬಳಿಕ ಪುಳಿಯೋಗರೆ ಪ್ರಸಾದ ವಿತರಣೆಯನ್ನು ಮಾಡಲಾಗಿತ್ತು. ಸುಮಾರು 200 ಮಂದಿಯ ಪೈಕಿ 100 ಮಂದಿ ಪುಳಿಯೋಗರೆ ಸೇವಿಸಿದ್ದರು. ಇಂದು ಬೆಳಗ್ಗೆ ಸುಮಾರು 70 ಮಂದಿಯಲ್ಲಿ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ.
ಗ್ರಾಮಕ್ಕೆ ತಾಲೂಕು ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಸ್ವಸ್ಥರಿಗೆ ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. (ದಿಗ್ವಿಜಯ ನ್ಯೂಸ್)