ಮಾರಮ್ಮ ಜಾತ್ರೆಯಲ್ಲಿ ಸಂಭ್ರಮದ ಸಿಡಿ ಉತ್ಸವ

dj clk sidi
Published on

ಚಳ್ಳಕೆರೆ: ತಾಲೂಕಿನ ಗೌರಸಮುದ್ರ ಗ್ರಾಮದ ಸಮೀಪ ಇರುವ ತುಮಲಿನಲ್ಲಿ ಮಂಗಳವಾರ ನಡೆದ ಗೌರಸಮುದ್ರ ಮಾರಮ್ಮನ ಅದ್ದೂರಿ ಜಾತ್ರೆಯ ಮರುದಿನವಾದ ಬುಧವಾರ ಸಂಭ್ರಮದಿಂದ ಸಿಡಿ ಉತ್ಸವ ನೆರವೇರಿಸಲಾಯಿತು.

ದೇವಿಯ ಸಿಡಿ ಉತ್ಸವ ಸಮೀಪದ ಕೋನಸಾಗರ ಗ್ರಾಮದ ಒಂದು ಕುಟುಂಬಸ್ಥರು ಮಾತ್ರ ಆಡುವ ಪರಂಪರೆ ಬೆಳೆಸಿಕೊಂಡು ಬಂದಿದ್ದಾರೆ. ಈ ಪದ್ಧತಿಯಂತೆ ಈ ವರ್ಷ ಸುಗ್ರೀವಯ್ಯ ಶಿವಣ್ಣ ಅವರ ಮನೆತನದ ವೀರೇಶ್ ಎಂಬುವರು ಸಿಡಿ ಆಡಿದ್ದಾರೆ.

ದೇವಿಯ ಒಕ್ಕಲು ಮನೆತನದವರಾಗಿರುವ ಕೋನಸಾಗರ ಗ್ರಾಮದ ಎನ್ಮುಲಬ್ಬ ಮೇಟಿ ಮನೆತನದವರು ಮಾತ್ರ ಸಿಡಿ ಉತ್ಸವ ಆಡುವ ಅನುಮತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಸಿಡಿ ಆಡಿರುವ ರೇಷ್ಮೆ ವೀರೇಶ್ ಮಾತನಾಡಿ, ದೇವಿಯ ಉತ್ಸವ ಆರಂಭವಾದ ಕಾಲದಿಂದ ಸಿಡಿ ಉತ್ಸವ ಆಡಿರುವ ಧಾರ್ಮಿಕ ಪರಂಪರೆ ಮೇಟಿ ಮನೆತನಕ್ಕಿದೆ.

2022ರ ವರೆಗೆ ಮುಜರಾಯಿ ಇಲಾಖೆ ಮತ್ತು ತಾಲೂಕು ಆಡಳಿತ ನಿಯಮದಂತೆ ಸಿಡಿ ಆಡಲಾಗಿದೆ. ಸಿಡಿ ಆಡಲು ನಮ್ಮ ಕುಟುಂಬದವರೇ ತೀರ್ಮಾನಿಸಿ ಇಂತವರು ಆಡಬೇಕು ಎಂದು ಗುರುತಿಸಲಾಗುತ್ತದೆ.

ದೇವಿಯ ಜಾತ್ರೆ ಸಾರು ಹಾಕಿದ ದಿನದಿಂದ 15 ದಿನಗಳ ಕಾಲ ಕಟ್ಟುನಿಟ್ಟಾಗಿ ಒಂದೊತ್ತು ಇರುತ್ತೇವೆ ಎಂದು ತಿಳಿಸಿದರು.

ಸಿಡಿ ಆಡುವ ದಿನದ ಬೆಳಗಿನ ಜಾವ ಮದಲಿಂಗನಂತೆ ಶೃಂಗಾರ ಮಾಡಿ ನಮ್ಮ ಮನೆತನದ ಬೋರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ, ಸಿಡಿ ಆಡುವ ಗೌರಸಮುದ್ರಕ್ಕೆ ಕಳುಹಿಸಿಕೊಡಲಾಗುತ್ತದೆ.

ದೇವಿಯ ದರ್ಶನ ಪಡೆದು ಬಳಿಕ ಗಂಗಾಪೂಜೆಗೆ ತೆರಳುತ್ತೇವೆ. ಮುತ್ತೈದೆ ಹೆಣ್ಣು ಮಕ್ಕಳು ಒನಕೆಯಿಂದ ಕುಟ್ಟಿ ತಯಾರಿಸಿದ ತಮ್‌ಟ ಇರಿಸಿ ಪೂಜೆ ಮಾಡಿಕೊಳ್ಳುತ್ತೇವೆ ಎಂದರು.

ಮರಳಿ ದೇವಿಯ ಸನ್ನಿಧಿಗೆ ಬರುತ್ತೇವೆ. ಗದ್ದಿಗೆ ಹಾಕಿ ನಮ್ಮ ಮನೆ ದೇವರು ಬೊಮ್ಮಲಿಂಗೇಶ್ವರ ಮತ್ತು ಗೌರಸಮುದ್ರ ದೇವಿಯನ್ನು ಕೂರಿಸಿ ವಿಶೇಷ ಪೂಜೆ ಮಾಡಿ, ಮೂರು ಸುತ್ತು ಸಿಡಿ ಕಂಬವನ್ನು ಪ್ರದಕ್ಷಿಣೆ ಹಾಕಿಸಲಾಗುತ್ತದೆ.

ನಂತರ ಕೊಂಡ್ಲಹಳ್ಳಿ ಗ್ರಾಮದ ಕೊಂಡಿಕಾರ ಶಾಸ್ತ್ರ ಸಂಪ್ರದಾಯದಂತೆ ಕೊಂಡಿಯನ್ನು ಮೈಗೆ ಮುಟ್ಟಿಸಲಾಗುತ್ತದೆ. ನಂತರ ಸಿಡಿ ಕಂಬಕ್ಕೆ ಕಟ್ಟಿ ಸಿಡಿ ಉತ್ಸವ ನೆರವೇರಿಸಲಾಗುತ್ತದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net