

ಮಂಡ್ಯ: ತಾಲೂಕಿನ ಕೆರಗೋಡು ಹೋಬಳಿ ಮಾರಗೌಡನಹಳ್ಳಿ ಗ್ರಾಮದಲ್ಲಿ ಮೂರು ದಿನದ ತಿರುಮಲ ದೇವರ ಸ್ಥಿರ ಬಿಂಬ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಶನಿವಾರ ಸಂಜೆ ಚಾಲನೆ ನೀಡಲಾಯಿತು. ಅಂತೆಯೇ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಗಂಗೆಪೂಜೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಮೀಸಲು ನೀರು ಹೊತ್ತು ಸಾಗಿದರು. ದೇವಾಲಯದ ಆವರಣದಲ್ಲಿ ವಿಶೇಷ ಹೂವಿನ ಅಲಂಕಾರ, ವಾಸ್ತು ಹೋಮ, ಲಘು ಪೂರ್ಣಾಹುತಿ, ಪ್ರಾಣ ಪ್ರತಿಷ್ಠಾಪನೆ ಸೇರಿದಂತೆ ಧಾರ್ಮಿಕ ದೇವತಾ ಕಾರ್ಯಗಳು ನಡೆದವು. ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಅಂತೆಯೇ ತೀರ್ಥ ಪ್ರಸಾದ ನಡೆಯಿತು.
ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಗ್ರಾಮದಲ್ಲಿ ತಿರುಮಲ ದೇವಾಲಯ ಪ್ರತಿಷ್ಠಾಪನೆ ಮಾಡಲಾಗಿದೆ. ದೇವರ ಸ್ಥಾಪನೆಗಾಗಿ ಹಲವು ತೀರ್ಥ ಕ್ಷೇತ್ರದ ನೀರನ್ನು ಪ್ರೋಕ್ಷಣೆ ಮಾಡಲಾಗಿದೆ. ಇದು ಭಕ್ತಿಯ ಸಂಕೇತವಾಗಿದೆ, ಎಲ್ಲರಿಗೂ ಶುಭವಾಗಲಿ, ದೇವರ ಕಾರ್ಯಕ್ರಮಗಳು ಹೆಚ್ಚು ನಡೆಯುವಂತಾಗಲಿ ಎಂದು ಆಶಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಸ್.ಆನಂದ, ಗ್ರಾಪಂ ಮಾಜಿ ಉಪಾಧ್ಯಕ್ಷ ವರದರಾಜು, ರಾಜು, ಗೋಪಾಲಯ್ಯ, ಬಿ.ಶಿವಲಿಂಗಯ್ಯ, ಪಾಪಣ್ಣ, ಶಿವಲಿಂಗಯ್ಯ ಇತರರಿದ್ದರು.