

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮರಗೋಡು ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಆಶ್ರಯದಲ್ಲಿ ಭಾರತೀ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಅಂತರ್ ಗ್ರಾಮ ಕ್ರೀಡಾಕೂಟದಲ್ಲಿ ಕಟ್ಟೆಮಾಡು ಗ್ರಾಮ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಒಟ್ಟಾರೆ ೨೮೧ ಪಾಯಿಂಟ್ ಕಲೆ ಹಾಕಿದ ಕಟ್ಟೆಮಾಡು ಗ್ರಾಮ ಅಗ್ರಸ್ಥಾನಿಯಾದರೆ ಕೇವಲ ೩ ಪಾಯಿಂಟ್‌ನಿಂದ ಹಿಂದುಳಿದ ಹೊಸ್ಕೇರಿ ಗ್ರಾಮ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ೨೩೨ ಅಂಕ ಪಡೆದ ಮರಗೋಡು ತಂಡ ಮೂರನೇ ಸ್ಥಾನ ಪಡೆದರೆ, ಅರೆಕಾಡು ಮತ್ತು ಐಕೋಳ ತಂಡಗಳು ಕ್ರಮವಾಗಿ ನಾಲ್ಕನೇ ಹಾಗೂ ಐದನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡವು.
ಪುರುಷರ ಕಬ್ಬಡ್ಡಿಯಲ್ಲಿ ಹೊಸ್ಕೇರಿ ಗ್ರಾಮ ತಂಡ ಅರೆಕಾಡು ಗ್ರಾಮವನ್ನ ಮಣಿಸಿ ಚಾಂಪಿಯನ್ ಆಗಿ ಹೊಹೊಮ್ಮಿತು. ಮಹಿಳಾ ಕಬ್ಬಡ್ಡಿ ಯಲ್ಲಿ ಮರಗೋಡು ತಂಡವನ್ನ ಮಣಿಸಿದ ಕಟ್ಟೆಮಾಡು ಗ್ರಾಮ ಪ್ರಶಸ್ತಿಗೆ ಮುತ್ತಿಕ್ಕಿತು. ವಾಲಿಬಾಲ್ ಸ್ಪರ್ಧೆಯಲ್ಲಿ ಅರೆಕಾಡು ಪ್ರಥಮ ಸ್ಥಾನ ಪಡೆದರೆ, ಹೊಸ್ಕೇರಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಮಹಿಳೆಯರ ಥ್ರೋಬಾಲ್ನಲ್ಲಿ ಕಟ್ಟೆಮಾಡು ತಂಡ ಮರಗೋಡು ತಂಡವನ್ನ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಫುಟ್ಬಾಲ್ ನಲ್ಲಿ ಹೊಸ್ಕೇರಿ ತಂಡ ಪೆನಾಲ್ಟಿ ಶೂಟೌಟ್ನಲ್ಲಿ ಕಟ್ಟೆಮಾಡು ತಂಡದ ವಿರುದ್ಧ ಜಯಭೇರಿ ಬಾರಿಸಿತು. ಪುರುಷರ ರೋಚಕ ಹಗ್ಗಜಗ್ಗಾಟದಲ್ಲಿ ಬಲಿಷ್ಠ ಮರಗೋಡು ತಂಡ ಹೊಸ್ಕೇರಿ ಗ್ರಾಮವನ್ನ ಸುಲಭವಾಗಿ ಮಣಿಸಿತು.
ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಹೊಸ್ಕೇರಿ ತಂಡ ಮರಗೋಡು ವಿರುದ್ಧ ಜಯದ ನಗೆ ಬೀರಿತು. ಹೊಸ್ಕೇರಿ ಗ್ರಾಮದ ರಾಷ್ಟ್ರೀಯ ಅಥ್ಲೀಟ್ ಎಂ.ಸಿ. ಮಿಲನ್ ಬೆಸ್ಟ್ ಮೇಲ್ ಅಥ್ಲೀಟ್ ಆಗಿ ಹೊರ ಹೊಮ್ಮಿದರೆ, ಅತ್ಯುತ್ತಮ ಮಹಿಳಾ ಅಥ್ಲೀಟ್ ಆಗಿ ಕಟ್ಟೆಮನೆ ದಿಯಾ ಪ್ರಶಸ್ತಿ ಪಡೆದರು.
೧೨ ವರ್ಷದ ಬಾಲಕಿ ಕಟ್ಟೆಮನೆ ಪ್ರಕೃತಿ ದೂರ ಓಟದಲ್ಲಿ ಎಲ್ಲಾ ಹಿರಿಯ ಓಟಗಾರ್ತಿಯರನ್ನ ಹಿಂದಿಕ್ಕಿ ತಾವು ಭವಿಷ್ಯದಲ್ಲಿ ಅತ್ಯುತ್ತಮ ಅಥ್ಲೀಟ್ ಆಗುವ ಭರವಸೆ ಮೂಡಿಸಿದರು. ದಿನಿವಿಡೀ ವಿವಿಧ ವಯೋಮಾನದವರಿಗೆ ವಿವಿಧ ಬಗೆಯ ಆಟೋಟ ಸ್ಪರ್ಧೆಗಳು ನಡೆದವು.
ಸಮರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಗ್ರಾಮಗಳನ್ನು ಒಗ್ಗೂಡಿಸುವುದರಲ್ಲಿ ಕ್ರೀಡಾಕೂಟಗಳು ಸಹಕಾರಿಯಾಗಿದೆ ಎಂದು ಪ್ರಶಂಸೆ ವ್ಯಕ್ತ ಪಡಿಸಿದರು. ಕಾಂಗ್ರೆಸ್ ಮುಖಂಡ ಡಾ.ಮಂಥರ್‌ಗೌಡ ಮಾತನಾಡಿ, ಗ್ರಾಮ ಮಟ್ಟದ ಕ್ರೀಡಾಕೂಟ ಆಯೋಜಿಸಿದ್ದ ಮರಗೋಡು ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್‌ನ ಪ್ರಯತ್ನ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಕ್ಲಬ್ ಅಧ್ಯಕ್ಷ ಕೋಚನ ಅನೂಪ್, ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ಕಾಂಗಿರ ಅಶ್ವಿನ್ ಸತೀಶ್, ಕ್ರೀಡಾ ಪ್ರೋತ್ಸಾಹಕರಾದ ಕಟ್ಟೆಮನೆ ಹರೀಶ್, ಕಟ್ಟಮನೆ ಲಲಿತ, ಕೊಂಪುಳಿ ಸುನಿ ದಿನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಟ್ಟೆಮನೆ ಸೋನಾಜಿತ್ ನಿರೂಪಿಸಿದರು.
ಕ್ರೀಡಾಕೂಟದ ಅಂಗವಾಗಿ ಮಂಗಳೂರಿನ ಹುಲಿ ಕುಣಿತ ಪ್ರದರ್ಶನ ಏರ್ಪಡಿಸಲಾಗಿತ್ತು. ಬಣ್ಣಬಣ್ಣದ ಹುಲಿಗಳು ವೈವಿಧ್ಯಮಯ ಸಾಹಸ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದವು. ಬಳಿಕ ಕೊಡಗಿನ ವಾಲಗಕ್ಕೆ ಮಂಗಳೂರಿನ ಹುಲಿಗಳು ಹೆಜ್ಜೆ ಹಾಕಿ ಗಮನ ಸೆಳೆದವು.
ಹಾಗೆಯೇ ಎರಡು ದಿನಗಳ ಕ್ರೀಡಾಕೂಟದ ಅಂಗವಾಗಿ ಮೊದಲ ದಿನ ಸುಳ್ಯ ಕೆವಿಜಿ ಸಂಸ್ಥೆಯಿಂದ ಉಚಿತ ದಂತ ತಪಾಸಣಾ ಶಿಬಿರ ನಡೆಯಿತು. ದ್ವಿತೀಯ ದಿನ ಮಡಿಕೇರಿ ಜನನಿ ಆಸ್ಪತ್ರೆಯ ವೈದ್ಯರಾದ ಡಾ ರಾಜೇಶ್ವರಿ, ಡಾ. ನವೀನ್ ತಂಡದಿಂದ ಆರೋಗ್ಯ ತಪಾಸಣಾ ಉಚಿತ ಶಿಬಿರ ಏರ್ಪಡಿಸಲಾಗಿತ್ತು.