

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಧಾರ್ಮಿಕ ಆಚರಣೆ ಮತ್ತು ಆರ್ಥಿಕತೆಯ ಉದ್ದೇಶ ಗ್ರಾಮೀಣ ಪ್ರದೇಶದ ಮಹಿಳೆಯರ ಬೆಳವಣಿಗೆಗೆ ಸಹಕಾರಿಯಾಗಿದೆ. ಇದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರ ಪರಿಕಲ್ಪನೆ ಎಂದು ಮೂರ್ನಾಡು ಅನ್ನಪೂರ್ಣೇಶ್ವರಿ ಸಹಕಾರ ಸಂಘ ಅಧ್ಯಕ್ಷ ಡಾ.ಮಹಾಬಲೇಶ್ವರ ಭಟ್ ಹೇಳಿದರು.
ವಿರಾಜಪೇಟೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್, ಸಾಮೂಜಿಕ ಶ್ರೀಸತ್ಯನಾರಾಯಣ ಪೂಜಾ ಸಮಿತಿ ಮೂರ್ನಾಡು ವಲಯ ಹಾಗೂ ಮರಗೋಡು-ಹುಲಿತಾಳ ಪ್ರಗತಿಬಂಧು ಸ್ವಸಹಾಯ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ವಲಯ ಮಟ್ಟದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.
ಹಗೆತನ ಮರೆತು ಒಗ್ಗೂಡಿ ದೇವರ ನೆನೆಯುವುದೇ ಹಬ್ಬವಾಗಿದೆ. ಕೆಟ್ಟ ವಿಚಾರಗಳಿಂದ ದೂರ ಉಳಿದು, ಉತ್ತಮ ಚಿಂತನೆಗಳಲ್ಲಿ ತೊಡಗಿಸಿ ಕೊಂಡಾಗ ಮಾತ್ರ ಧಾರ್ಮಿಕತೆಯಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯ. ಧರ್ಮಸ್ಥಳ ಕ್ಷೇತ್ರವು ಯಾವುದೇ ಜಾತಿ, ಮತ ಭೇದವಿಲ್ಲದೆ ಮಾನವೀಯ ಮೌಲ್ಯದೊಂದಿಗೆ ಸರ್ವರಿಗೂ ನೆರಳಾಗಿ ನಿಂತಿದೆ ಎಂದು ಡಾ.ಮಹಾಬಲೇಶ್ವರ ಭಟ್ ಮೆಚ್ಚುಗೆ ವ್ಯಕ್ತ ಪಡಿಸಿದರು.
ವೇದಿಕೆಯಲ್ಲಿ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಕೆ.ಬಿ. ಶೇಖರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ನಿರ್ದೇಶಕಿ ಲೀಲಾವತಿ, ಮರಗೋಡು ಗ್ರಾಪಂ ಅಧ್ಯಕ್ಷೆ ಅಯ್ಯಂಡ್ರ ಪೂರ್ಣಿಮಾ ಶ್ರೀನಿವಾಸ್, ಕಡಬದ ಪ್ರಗತಿಪರ ಕೃಷಿಕ ಎನ್.ಕೆ. ನಾರಾಯಣ ರೈ, ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಕೆ.ಜಿ.ಚಂದ್ರಕಲಾ ಮತ್ತಿತರರು ಇದ್ದರು.
ಚಿತ್ರದುರ್ಗಕ್ಕೆ ವರ್ಗವಣೆಗೊಂಡಿರುವ ಮೂರ್ನಾಡು ವಲಯ ಮೇಲ್ವಿಚಾರಕಿ ಅನುಷಾ ರೈ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.
ಸತ್ಯನಾರಾಯಣ ಪೂಜೆಯಲ್ಲಿ ೩೫ ಜೋಡಿ ಭಾಗವಹಿಸಿದ್ದರು. ಮರಗೋಡು ಒಕ್ಕೂಟ ಅಧ್ಯಕ್ಷೆ ಮಮತ ಸ್ವಾಗತಿಸಿದರು. ಮೂರ್ನಾಡು ವಲಯ ಮೇಲ್ವಿಚಾರಕಿ ಅನುಷಾ ರೈ ವರದಿ ವಾಚಿಸಿದರು. ಮರಗೋಡು ಒಕ್ಕೂಟದ ಸೇವಾ ಪ್ರತಿನಿಧಿ ಲತಾ ವಂದಿಸಿದರು.