ಅಪಾಯ ಆಹ್ವಾನಿಸುತ್ತಿದೆ ಮರಣಗುಂಡಿ

8adarshkdga1
Published on

ಮಡಿಕೇರಿ: ಮರಗೋಡು ಹೊಸ್ಕೇರಿ ರಸ್ತೆಯಲ್ಲಿ ಮರಗೋಡು ಗ್ರಾಮ ಕೇಂದ್ರದಿಂದ ಸುಮಾರು ೩೦೦ ಮೀಟರ್ ದೂರದಲ್ಲಿ ರಸ್ತೆ ಬದಿ ಬೃಹತ್ ಹೊಂಡವೊಂದು ಸೃಷ್ಟಿಯಾಗಿ ಅಪಾಯ ಆಹ್ವಾನಿಸುತ್ತಿದೆ.


ಗುಂಡಿ ರಸ್ತೆಯ ತೀರಾ ಅಂಚಿನಲ್ಲೇ ಇರುವ ಪರಿಣಾಮ ವಾಹನ ಸವಾರರ ಪಾಲಿಗೆ ಅಕ್ಷರಶಃ ಮರಣ ಗುಂಡಿಯಾಗಿದೆ. ಕೆಲ ದಿನಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್‌ನ ಚಕ್ರವೊಂದು ಗುಂಡಿಗೆ ಸಿಲುಕಿ ಪರದಾಡುವಂತಾಗಿತ್ತು. ಎದುರಿನಿಂದ ಬರುವ ವಾಹನಗಳಿಗೆ ದಾರಿ ನೀಡುವ ಯತ್ನದಲ್ಲಿ ಹಲವು ದ್ವಿಚಕ್ರ ವಾಹನಗಳು ಉರುಳಿ ಬಿದ್ದು ಸವಾರರು ಗಂಭೀರ ಗಾಯಗೊಂಡ ಪ್ರಕರಣಗಳು ನಡೆದಿವೆ.


ಹಲವು ಕಾರುಗಳು ಕೂಡ ಗುಂಡಿಗೆ ಸಿಲುಕಿ ದಾರಿಹೋಕರು ಅವುಗಳನ್ನು ತಳ್ಳಿರುವ ಪ್ರಸಂಗಗಳೂ ನಡೆದಿವೆ. ರಸ್ತೆಯ ಎರಡೂ ಧಿಕ್ಕುಗಳು ಇಳಿಜಾರಿನಿಂದ ಕೂಡಿರುವುದರಿಂದ ವಾಹನಗಳು ವೇಗವಾಗಿ ಬಂದು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಗುಂಡಿಯನ್ನು ತಕ್ಷಣವೇ ಮುಚ್ಚಿ ಮುಂದಾಗಬಹುದಾದ ಅನಾಹುತ ತಪ್ಪಿಸುವಂತೆ ಮರಗೋಡು ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಯನ್ನು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net