

ಬೆಂಗಳೂರು: ಬಿಡಿಎ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ಮುಖ್ಯ ಆರ್ಟೀರಿಯಲ್ ರೋಡ್ (ಎಂಆರ್‌ಎ) ಅನ್ನು ಮೈಸೂರು ಹೆದ್ದಾರಿಗೆ ಸಂಪರ್ಕಿಸುವ ಕುರಿತು ಪರಿಹಾರೋಪಾಯ ಕಂಡುಕೊಳ್ಳಲು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೂಚಿಸಿದ್ದಾರೆ.
ಎನ್‌ಎಚ್‌ಎಐ ಹಾಗೂ ಬಿಡಿಎ ಅಧಿಕಾರಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಸಚಿವರು ಈ ನಿರ್ದೇಶನವನ್ನು ನೀಡಿದರು. ಕಳೆದ ವಾರವಷ್ಟೇ ಕರಂದ್ಲಾಜೆ ಅವರು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದ ಬೆನ್ನಲ್ಲೇ ಸಚಿವೆಯು ಈ ಸಭೆಯಲ್ಲಿ ಕೆಲ ತಾಂತ್ರಿಕ ಅಂಶಗಳ ಬಗ್ಗೆ ಚರ್ಚಿಸಿದರು.
ಸಂಪರ್ಕ ವ್ಯವಸ್ಥೆ ಇಲ್ಲದೆ ವಾಹನ ದಟ್ಟಣೆ ಮತ್ತಷ್ಟು ಹದಗೆಡುತ್ತದೆ ಹಾಗೂ ಎಕ್ಸ್‌ಪ್ರೆಸ್‌ವೇ ಉದ್ದೇಶ ಈಡೇರುವುದಿಲ್ಲ. ಸುಗಮ ಸಂಚಾರ ಮತ್ತು ಸರ್ವೀಸ್ ಹಾಗೂ ಹೊರ ವರ್ತುಲ ರಸ್ತೆಗಳ ಮೇಲಿನ ಒತ್ತಡ ಕಡಿಮೆಗೊಳಿಸಲು ಎಂಎಆರ್ ರಸ್ತೆ ಮತ್ತು ಎಕ್ಸ್‌ಪ್ರೆಸ್‌ವೇ ನಡುವೆ ರಾಂಪ್ ಅತ್ಯಗತ್ಯವಿದೆ. ಜತೆಗೆ ಯೋಜಿತ ಬಾಹ್ಯ ವರ್ತುಲ ರಸ್ತೆಯನ್ನೂ (ಪಿಆರ್‌ಆರ್-2) ಮೈಸೂರು ಎಕ್ಸ್‌ಪ್ರೆಸ್‌ವೇ ಜತೆಗೆ ಸಂಪರ್ಕಿಸಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ.
ಜಂಟಿ ಪರಿಶೀಲನೆಗೆ ಸೂಚನೆ:
ಎಕ್ಸ್‌ಪ್ರೆಸ್ ವೇ ಹಾಗೂ ಎಂಎಆರ್ ಈ ಎರಡೂ ರಸ್ತೆಗಳನ್ನು ಸಂಪರ್ಕಿಸುವ ಸಂಬಂಧ ಎನ್‌ಎಚ್‌ಎಐ ಹಾಗೂ ಬಿಡಿಎ ಎಂಜಿನಿಯರ್‌ಗಳು ಸಮಾಲೋಚನೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಜತೆಗೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸುವಂತೆಯೂ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಸಭೆಯಲ್ಲಿ ಎನ್‌ಎಚ್‌ಎಐ ಪ್ರಾದೇಶಿಕ ನಿರ್ದೇಶಕ ವಿ.ಪಿ. ಬ್ರಹ್ಮಣಕ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ನಾಡಪ್ರಭು ಕೆಂಪೇಗೌಡ ಬಡಾವಣೆ ಓಪನ್ ಫೋರಂನ ಪದಾಧಿಕಾರಿಗಳು ಭಾಗವಹಿಸಿದ್ದರು.