ರಾಜ್ಯದ ಅಭಿವೃದ್ಧಿಗೆ ನಕಾಶೆ: 2025ಕ್ಕೆ ಜಿಎಸ್​ಡಿಪಿ ದ್ವಿಗುಣಗೊಳಿಸುವ ಗುರಿ ಹೊತ್ತ ಸರ್ಕಾರ

V Special
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಕರೊನಾ ಸಂಕಷ್ಟದ ನಡುವೆಯೂ ಆರ್ಥಿಕ ಚೇತರಿಕೆ ಗೋಚರಿಸಿರುವ ಹಿನ್ನೆಲೆಯಲ್ಲಿ ಸಮಗ್ರ ಅಭಿವೃದ್ಧಿಯ ಮೂಲಕ ಕರ್ನಾಟಕವನ್ನು ಮರುನಿರ್ವಿುಸುವ ಉದ್ದೇಶದೊಂದಿಗೆ ಸರ್ಕಾರ ನೀಲಿನಕ್ಷೆ ಸಿದ್ಧಪಡಿಸುತ್ತಿದೆ. ಆ ಮೂಲಕ 2025ಕ್ಕೆ ಜಿಎಸ್​ಡಿಪಿ(ರಾಜ್ಯದ ಒಟ್ಟಾರೆ ಉತ್ಪನ್ನ ದರ)ಯನ್ನು ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆ ಹೊಂದಿದೆ.

ಜಿಎಸ್​ಡಿಪಿ ಹೆಚ್ಚಾದರೆ ತಾನೇ ತಾನಾಗಿ ಎಲ್ಲ ವಲಯ ಬೆಳವಣಿಗೆಯಾಗಿ ಆರ್ಥಿಕ ಚಟುವಟಿಕೆ ಚೇತರಿಕೆ ಕಂಡು ಅಭಿವೃದ್ಧಿಯಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬಹುದೆಂಬುದು ಸರ್ಕಾರದ ಉದ್ದೇಶ. ಬಜೆಟ್​ಗೆ ಮುಂಚೆಯೇ ಆ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸುವ ಕೆಲಸ ನಡೆದಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ. ಸದ್ಯ ಜಿಎಸ್​ಡಿಪಿ 18.03 ಲಕ್ಷ ಕೋಟಿ ರೂ.ಗಳಿದ್ದು, ಅದನ್ನು 2025ರ ವೇಳೆಗೆ 37.17 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದು ಕಷ್ಟದ ಕೆಲಸವಾದರೂ ನಿಗದಿತ ಗುರಿಯಲ್ಲಿ ಶೇ.50ರಷ್ಟಾದರೂ ಸಾಧಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಲವು ಮಾಗೋಪಾಯ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಅಧಿಕಾರಿಗಳು, ತಜ್ಞರೊಂದಿಗೆ ರ್ಚಚಿಸಿ ಸಲಹೆ ಪಡೆಯುತ್ತಿದ್ದಾರೆಂದು ಮೂಲಗಳು ತಿಳಿಸಿವೆ. ರಾಜ್ಯದ ಜಿಡಿಪಿಗೆ ಬಹು ಮುಖ್ಯ ಕೊಡುಗೆ ನೀಡುವ ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರದಲ್ಲಿ ಈಗಿರುವ ಪ್ರಮಾಣ ವೃದ್ಧಿಸುವುದಕ್ಕೆ ಏನೇನು ಮಾಡಬೇಕೆಂಬ ಬಗ್ಗೆ ಚರ್ಚೆ ನಡೆದಿದೆ. ಕೆಲವೊಂದು ಸುಧಾರಣಾ ಕ್ರಮ ಕೈಗೊಳ್ಳಲಾಗುತ್ತದೆ. ಆ ಕ್ಷೇತ್ರಗಳ ವೃದ್ಧಿಯ ಮೂಲಕ ಅಭಿವೃದ್ಧಿ ಸಾಧಿಸುವ ಗುರಿ ಹಾಕಿಕೊಂಡಿದೆ. ಆರ್ಥಿಕ ತಜ್ಞರ ಅಭಿಪ್ರಾಯದ ಪ್ರಕಾರ ಆರ್ಥಿಕತೆಯನ್ನು ವೃದ್ಧಿಸಿಕೊಳ್ಳಲು ಗುಜರಾತ್, ಉತ್ತರ ಪ್ರದೇಶ, ತಮಿಳುನಾಡು, ಕರ್ನಾಟಕಕ್ಕೆ ಅವಕಾಶಗಳಿವೆ. ಆ ಅವಕಾಶವನ್ನು ಬಳಸಿಕೊಳ್ಳುವ ಮೂಲಕ ಶ್ರೇಯಾಂಕದಲ್ಲಿ ಈ ರಾಜ್ಯಗಳಿಗಿಂತ ಮೇಲೆ ಹೋಗುವುದು ಸರ್ಕಾರದ ಉದ್ದೇಶವಾಗಿದೆ. ಹೂಡಿಕೆಗೆ ಕರ್ನಾಟಕ ಮೆಚ್ಚಿನ ತಾಣವಾಗಿದೆ ಎಂಬುದು ಪದೇಪದೆ ಸಾಬೀತಾಗುತ್ತಿದೆ. ಆದ್ದರಿಂದ ಬೆಂಗಳೂರಿನ ಹೊರಗಡೆಯೂ ಹೂಡಿಕೆ ಬರುವಂತೆ ನೋಡಿಕೊಂಡರೆ ಅಭಿವೃದ್ಧಿ ಸಾಧ್ಯವೆಂದು ಸರ್ಕಾರ ನಂಬಿದೆ. ಇಡೀ ದೇಶಕ್ಕೆ ಬರುತ್ತಿರುವ ಹೂಡಿಕೆಯಲ್ಲಿ ಶೇ. 25 ಪಾಲು ರಾಜ್ಯಕ್ಕೆ ಇದೆ. ಅದನ್ನು ಇನ್ನಷ್ಟು ಹೆಚ್ಚಿಸುವುದು ಸರ್ಕಾರದ ಗುರಿಯಾಗಿದೆ.

ಯಾವ ವಲಯಗಳಿಗೆ ಆದ್ಯತೆ?: ಕೃಷಿ, ಆಹಾರ ಸಂಸ್ಕರಣೆ, ಜವಳಿ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಏರೋಸ್ಪೇಸ್, ರಕ್ಷಣೆ, ಸಂಶೋಧನೆ, ಸಿದ್ಧ ಉಡುಪು, ಪ್ರವಾಸೋದ್ಯಮ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅದರೊಂದಿಗೆ ಪ್ರಾಥಮಿಕ ವಲಯಗಳಾದ ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ವಸತಿ ಸಮಸ್ಯೆ ಹೋಗ ಲಾಡಿಸುವುದು ಸರ್ಕಾರದ ಉದ್ದೇಶವಾಗಿದೆ.

ತಜ್ಞರ ಸಲಹೆ

· ಎಲ್ಲ ಕ್ಷೇತ್ರಗಳ ಸಮಾನ ಅಭಿವೃದ್ಧಿ

· ಸುಸ್ಥಿರ ಬೆಳವಣಿಗೆ, ಉದ್ಯೋಗ ಅವಕಾಶಗಳ ಹೆಚ್ಚಳ

· ಕೌಶಲ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು

· ಸೂಕ್ಷ್ಮ ಆರ್ಥಿಕ ಚಟುವಟಿಕೆಗೆ ಒತ್ತು

ಬಜೆಟ್​ನಲ್ಲಿ ಘೋಷಣೆ

ಸಿಎಂ ಬೊಮ್ಮಾಯಿ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಮಂಡಿಸಲಿರುವ ಬಜೆಟ್​ನಲ್ಲಿ ರಾಜ್ಯದ ಆರ್ಥಿಕತೆ ಹೆಚ್ಚಿಸುವುದಕ್ಕೆ ಅಗತ್ಯವಾದ ವಲಯವಾರು ಸುಧಾರಣಾ ಕ್ರಮ ಪ್ರಕಟಿಸಲಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ. ಮುಂದಿನ ಬಜೆಟ್ ಚುನಾವಣಾಪೂರ್ವ ಬಜೆಟ್ ಆಗಿರುತ್ತದೆ. ಸರ್ಕಾರ ಒಂದಷ್ಟು ಜನಪ್ರಿಯ ಕಾರ್ಯಕ್ರಮಗಳಿಗೆ ಮೊರೆ ಹೋಗುವುದು ಅನಿವಾರ್ಯವೂ ಆಗಿರುತ್ತದೆ. ಆ ನಡುವೆಯೇ ಅಭಿವೃದ್ಧಿ ಹಾಗೂ ಸುಧಾರಣೆಗೂ ಒತ್ತು ನೀಡುವ ಉದ್ದೇಶವಿದೆ ಎಂದು ಮೂಲಗಳು ಹೇಳಿವೆ. ಉತ್ತಮ ಮಳೆ ಹಾಗೂ ಯುವಕರು ಕೃಷಿಯತ್ತ ಹೊರಳಿದ ಪರಿಣಾಮ ಕಳೆದ ವರ್ಷ ಕೃಷಿ ಕ್ಷೇತ್ರದ ಕೊಡುಗೆ ಹೆಚ್ಚಾಗಿತ್ತು. ಆದರೆ ಕೈಗಾರಿಕೆ ಹಾಗೂ ಸೇವಾ ವಲಯದ ಕೊಡುಗೆ ಕರೊನಾ ಕಾರಣಕ್ಕಾಗಿ ಕಡಿಮೆಯಾಗಿದೆ. ಅದನ್ನು ವೃದ್ಧಿಸುವುದು ಅಗತ್ಯವಾಗಿದೆ.

ಏನೇನು ಸುಧಾರಣೆ ಸಾಧ್ಯತೆ?

  • ಸಂಗ್ರಹಣೆ ಸುಧಾರಣೆ ಮೂಲಕ ತೆರಿಗೆ ಹೆಚ್ಚಳ ಮಾಡುವುದು
  • ನೀರಾವರಿ ಯೋಜನೆಗಳನ್ನು ಗಡುವಿನೊಳಗೆ ಮುಗಿಸುವುದು
  • ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ ಹಣ ಉಳಿಸುವುದು
  • ಉದ್ಯಮ ಸ್ಥಾಪನೆಗೆ ರಿಯಾಯಿತಿ, ವಿನಾಯಿತಿ ಹೆಚ್ಚಿಸುವುದು
  • ಉತ್ತರ ಕರ್ನಾಟಕಕ್ಕೆ ಹೋಗುವ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು
  • ರೈತರ ಆದಾಯ ದ್ವಿಗುಣಕ್ಕೆ ಒತ್ತು ನೀಡುವುದು
  • ಮಹಿಳಾ ಸಬಲೀಕರಣಕ್ಕೆ ಪ್ರತ್ಯೇಕ ಸ್ತ್ರೀಶಕ್ತಿ ಬ್ಯಾಂಕ್ ಸ್ಥಾಪನೆ ನಿರೀಕ್ಷೆ
  • ಆಮದು ಕಡಿಮೆ ಮಾಡಿ ರಫ್ತು ಹೆಚ್ಚಳ ಮಾಡುವುದು
  • ಇನ್ನೂ 10 ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿಗೆ ಒಳಪಡಿಸುವುದು
  • ದೇಶದ ಐಟಿ-ಬಿಟಿ ರಫ್ತಿನಲ್ಲಿರುವ ರಾಜ್ಯದ ಕೊಡುಗೆಯನ್ನು ಶೇ.26ರಿಂದ 36ಕ್ಕೆ ಹೆಚ್ಚಿಸುವುದು
  • ಐಟಿ ವಹಿವಾಟು 230 ಮಿಲಿಯನ್ ಡಾಲರ್​ಗಳಿಂದ ಹೆಚ್ಚಳ ಮಾಡುವುದು
  • ಸ್ಟಾರ್ಟಪ್​ಗಳ ಸಂಖ್ಯೆ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು
  • ಶಿಕ್ಷಣ ಪದ್ಧತಿಯಲ್ಲಿ ಸಮಗ್ರ ಬದಲಾವಣೆಗೆ ಎನ್​ಇಪಿ ಪರಿಣಾಮಕಾರಿ ಜಾರಿ
  • ಕೃಷಿ ಉತ್ಪನ್ನಗಳ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ, ರೈತ ಸಂತೆಗಳ ಜಾರಿಯ ಉದ್ದೇಶ
  • ರೈತ ಉತ್ಪಾದನಾ ಸಂಸ್ಥೆಗಳನ್ನು ಸ್ಟಾರ್ಟಪ್​ಗಳಾಗಿ ಪರಿವರ್ತನೆ
  • ಕೃಷಿ ಯಂತ್ರಧಾರೆಯನ್ನು ವೃದ್ಧಿಸುವುದು

ಬಿಡದ ಕರೊನಾತಂಕ

ಕರೊನಾ ಕಳೆದ 2 ವರ್ಷ ರಾಜ್ಯದ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ. ಈ ವರ್ಷವೂ ಸೋಂಕು ಕಡಿಮೆಯಾಗಿಲ್ಲ. ಫೆಬ್ರವರಿಯ ವೇಳೆಗೆ ಹೆಚ್ಚಾಗಬಹುದೆಂಬ ಭಯ ಇದೆ. ಒಂದು ವೇಳೆ ಆ ರೀತಿ ಆದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗುವುದಿಲ್ಲವೆಂಬ ಅಳುಕು ಸರ್ಕಾರಕ್ಕೆ ಇದ್ದೇ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net