

ಚನ್ನಪಟ್ಟಣ:
ಸರ್ಕಾರ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ (ಜಾತಿ) ಸಮೀಕ್ಷೆಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಸಮೀಕ್ಷೆಯನ್ನು ಸರಿಯಾದ ನಿಟ್ಟಿನಲ್ಲಿ ನಡೆಸಬೇಕು. ಇಲ್ಲವಾದರೆ ಸರ್ಕಾರ ಸಮುದಾಯದ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಚಕ್ಕೆರೆ ವೆಂಕಟರಾಮೇಗೌಡ ಎಚ್ಚರಿಕೆ ನೀಡಿದರು.
ನಗರದ ನೇಗಿಲಯೋಗಿ ಟ್ರಸ್ಟ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆ ನಡೆಸುತ್ತಿರುವ ಕೆಲ ಗಣತಿದಾರರು ಗೌಡ ಹಾಗೂ ಒಕ್ಕಲಿಗ ಜಾತಿಯ ಹೆಸರಿನಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ತಕ್ಷಣವೇ ಈ ಗೊಂದಲ ಮೂಡಿಸುವುದನ್ನು ನಿಲ್ಲಿಸಬೇಕು. ಈಗಾಗಲೇ ರಾಜ್ಯ ಒಕ್ಕಲಿಗರ ಸಂಘ ಹಾಗೂ ನಮ್ಮ ಸಮುದಾಯದ ಗುರುಗಳು ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ನಮೂದಿಸಲು ಸೂಚಿಸಿದ್ದಾರೆ. ಆದರೆ, ಗಣತಿದಾರರು ಜಾತಿ ಒಕ್ಕಲಿಗ ಎಂದು ಹೇಳಿದರೂ, ಸಹ ಉಪಜಾತಿ ಕೇಳಿ, ಗೌಡರ ಎಂದು ಕೇಳಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ನ್ಯಾಯಾಲದ ಮೊರೆ:
ಆನ್‌ಲೈನ್ ಮುಖಾಂತರ ಸಮೀಕ್ಷೆ ನಡೆಸುತ್ತಿರುವ ಕಾರಣ ಗಣತಿದಾರರು ಏನು ನಮೂದಿಸುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಜನಸಂಖ್ಯೆ ಒಂದು ಕಾಲು ಕೋಟಿ ಇದೆ. ಆದರೆ, ಸರ್ಕಾರ ಅರವತ್ತು ಲಕ್ಷ ಜನಸಂಖ್ಯೆ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗರ ಸಂಘದಿಂದಲೂ ಸಮುದಾಯದ ಜನಸಂಖ್ಯೆ ಅರಿಯುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲಾಗುವುದು. ಸರ್ಕಾರ ಹಾಗೂ ನಮ್ಮ ಸಮೀಕ್ಷೆಯಲ್ಲಿ ವ್ಯತ್ಯಾಸ ಕಂಡು ಬಂದರೆ, ಮುಂದೆ ನ್ಯಾಯಾಲಯಕ್ಕೆ ಹೋಗಿ ಹೋರಾಟ ನಡೆಸಲಾಗುವುದು ಎಂದರು.
ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷ ರಾಂಪುರ ಧರಣೀಶ್ ಮಾತನಾಡಿ, ಗೌಡ ಎಂಬುದು ಜಾತಿ ಅಲ್ಲ ಅದು ಪದನಾಮ. ಆದರೆ, ಒಕ್ಕಲಿಗರು ಎಂದು ಹೇಳಿದ ಮೇಲೂ ಉಪಜಾತಿ ಹೆಸರಿನಲ್ಲಿ ಗೌಡರಾ ಎಂದು ಕೇಳಿ ಗೊಂದಲ ಮೂಡಿಸಲಾಗುತ್ತಿದೆ. ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿಎಂ ಸಿದ್ದರಾಮಯ್ಯನವರೇ ಸಮೀಕ್ಷೆ ವೇಳೆ ಕುರುಬರು ಎಂದು ಬರೆಯಿಸಿ ಎಂದು ಹೇಳಿದ್ದಾರೆ. ಆದರೆ, ನಮ್ಮ ಸಮುದಾಯದ ನಾಯಕರು ಜನರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸಮೀಕ್ಷೆಗೆ ಬಂದಾಗ ಎಲ್ಲರೂ ಒಕ್ಕಲಿಗರು ಎಂದೇ ಬರೆಯಿಸಿ ಎಂದು ಮನವಿ ಮಾಡಿದರು.
ನಿವೃತ್ತ ಮುಖ್ಯ ಶಿಕ್ಷಕ ಹರಿದಾಸ್ ಮಾತನಾಡಿ, ಸಮೀಕ್ಷೆಗೆ ನಮ್ಮ ಮನೆಗೆ ಬಂದ ವೇಳೆ ಒಕ್ಕಲಿಗ ಎಂದು ಹೇಳಿದರೂ ಗೌಡರ ಎಂದು ಕೇಳಿ ಅದನ್ನು ದಾಖಲಿಸಲು ಹೋದರು. ಈ ವೇಳೆ ನಮಗೂ ಗಣತಿದಾರರಿಗೆ ವಾದವಾಗಿ ಗೌಡ ಎಂದೇ ನಮೂದಿಸುವುದಾಗಿ ತಿಳಿಸಿದರು. ಇದಲ್ಲದೇ ನಮ್ಮ ಗ್ರಾಮವಾದ ಬೈರಾಪಟ್ಟಣದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಮನೆಗಳವರ ವಿವರ ದಾಖಲಿಸುವಾಗ ಗೌಡ ಎಂದೇ ನಮೂದಿಸಿರುವುದು ಕಂಡುಬಂದಿದೆ ಎಂದು ಆರೋಪಿಸಿದರು.
ಇದೇ ವೇಳೆ ಬೈರಾಪಟ್ಟಣದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ತಹಸೀಲ್ದಾರ್‌ಗೆ ದೂರು ನೀಡಲಾಗುವುದು ಎಂದು ಸಮುದಾಯದ ಮುಖಂಡರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಪ್ರಮುಖರಾದ ವಿಜಯ್ ರಾಂಪುರ, ತಿಪ್ರೇಗೌಡ, ದಿವ್ಯಚೇತನ ವರದರಾಜು, ಎಲೇಕೇರಿ ಮಂಜುನಾಥ್, ಶಂಭುಗೌಡ ನಾಗವಾರ, ತೊರೆಹೊಸೂರು ರಂಗಸ್ವಾಮಿ ಸೇರಿದಂತೆ ಹಲವರು ಇದ್ದರು.
ಸರ್ಕಾರ ಹಿಂದು ಧರ್ಮವನ್ನು ಒಡೆಯುವ ಹುನ್ನಾರ ನಡೆಸಿದೆ. ಗೊಂದಲ ಮೂಡಿಸುವ ಸಲುವಾಗಿಯೇ ಉಪಜಾತಿಯಲ್ಲಿ ಗೌಡ ಎಂದು ನಮೂದಿಸುವ ಕಾರ್ಯ ಮಾಡಲಾಗಿದೆ. ಸಮೀಕ್ಷೆ ವೇಳೆ ಸಮುದಾಯದವರು ಒಕ್ಕಲಿಗರು ಎಂದೇ ನಮೂದಿಸಬೇಕು ಎಂದು ಮನವಿ ಮಾಡಿದರು
- ಎಂ.ಎನ್.ಆನಂದಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ.