ಅಂಗವಿಕಲರ ಕಲ್ಯಾಣಕ್ಕೆ ಹಲವು ಯೋಜನೆ : ಐಎಎಸ್ ಅಧಿಕಾರಿ ಕೆ.ಲಕ್ಷ್ಮೀಪ್ರಿಯಾ

jss
Published on

ಮೈಸೂರು: ಅಂಗವಿಕಲರ ಕಲ್ಯಾಣಕೋಸ್ಕರ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಲವಾರು ಯೋಜನೆ ಹಾಗೂ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆ ನಿರ್ದೇಶಕಿ ಕೆ.ಲಕ್ಷ್ಮೀಪ್ರಿಯಾ ಹೇಳಿದರು.

ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ನಗರದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಸಮುದಾಯ ಆಧಾರಿತ ಪುನರ್ವಸತಿ’ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಅಂಗವಿಕಲರ ಕಲ್ಯಾಣಕೋಸ್ಕರ ಸರ್ಕಾರ ಎಷ್ಟೇ ಯೋಜನೆಗಳು ರೂಪಿಸಿದರೂ ಅದು ಅಂಗವಿಕಲರಿಗೆ ಪರಿಣಾಮಕಾರಿಯಾಗಿ ತಲುಪಲು ಸಮುದಾಯದ ಸಹಕಾರದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಅಂಗವಿಕಲತೆಯಲ್ಲಿ ಹಲವಾರು ವಿಧಗಳು ಇದ್ದು, ಅವರ ಸಮಸ್ಯೆಗಳು ಕೂಡ ಭಿನ್ನವಾಗಿವೆ. ಅವರ ಸಮಸ್ಯೆಗಳನ್ನು ಮನೆ ಮನೆಗಳಿಗೆ ತೆರಳಿ ಸಂಗ್ರಹಿಸಿ ಪರಿಹರಿಸುವ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ 4,300 ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳನ್ನು ತೆರೆಯಲಾಗಿದ್ದು, ಈ ಗ್ರಂಥಾಲಯಗಳು ಅಂಗವಿಕಲರಿಗೂ ದೊರೆಯುವಂತೆ ಮಾಡಲು ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೇವಲ ಅಂಗವಿಕಲರು ಮಾತ್ರವಲ್ಲ ಅವರ ಪಾಲಕರು ಸಹ ಗ್ರಂಥಾಲಯಗಳನ್ನು ಬಳಕೆ ಮಾಡಿಕೊಳ್ಳಲು ಪೂರಕವಾದ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಅಂಗವಿಕಲರಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಶಾಸನ ನೀಡಲಾಗುತ್ತಿದ್ದು, ಆ ಮೂಲಕ ಅವರಿಗೆ ಸಣ್ಣ ಪ್ರಮಾಣದ ಆರ್ಥಿಕ ನೆರವನ್ನು ಸರ್ಕಾರ ನೀಡುತ್ತಿದೆ. ಅಂಗವಿಕಲರು ಸಾಮಾನ್ಯ ಜನರ ರೀತಿಯಲ್ಲಿ ದುಡಿಯಲು ಸಾಧ್ಯವಿಲ್ಲ. ಈ ಕಾರಣಕ್ಕೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅಂಗವಿಕರಿಗೆ ಸಣ್ಣಪುಟ್ಟ ಕೆಲಸ ಕಾರ್ಯಗಳನ್ನು ನೀಡಲಾಗುತ್ತಿದ್ದು, ಇದರಿಂದ ಅಂಗವಿಕಲರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ಅಲ್ಲದೆ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಅಂಗವಿಕಲರ ಕಲ್ಯಾಣಕೋಸ್ಕರ ಶೇ.5 ರಷ್ಟು ನಿಧಿಯನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಚುನಾವಣಾ ಆಯೋಗ ಅಂಗವಿಕಲರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ ಮಾಡಿಕೊಟ್ಟಿದೆ. ಅಂಗವಿ ಕಲರ ಸಮಸ್ಯೆಗಳನ್ನು ಅರಿತು ಅವರಿಗೆ ಅನುಕೂಲ ಕಲ್ಪಿಸಿಕೊಡುವ ಕಾರ್ಯಗಳು ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿದೆ. ಅಂಗವಿಕಲರಿಗೆ ಎಲ್ಲ ಅವಕಾಶಗಳು ದೊರೆತು ಅವರು ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳನ್ನು ಪಡೆಯಬೇಕು. ಇದಕ್ಕೆ ಸರ್ಕಾರದ ಜತೆಗೆ ಸಮುದಾಯದ ಪಾತ್ರ ತುಂಬಾ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್ ಮಾತನಾಡಿ, ಜೆಎಸ್‌ಎಸ್ ಮಹಾವಿ ದ್ಯಾಪೀಠದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ನಡೆಸುವ ಎನ್‌ಎಸ್‌ಎಸ್ ಶಿಬಿರಗಳು ಕೇವಲ ಕೆಲವು ದಿನಗಳಿಗೆ ಮಾತ್ರ ಸೀಮಿತವಾಗಿರು ವುದಿಲ್ಲ. ಶಿಬಿರಕ್ಕೆ ಅಯ್ಕೆ ಮಾಡುವ ಗ್ರಾಮವನ್ನು ಒಂದು ವರ್ಷ ದತ್ತು ಪಡೆದು ಆ ಗ್ರಾಮದ ಆರೋಗ್ಯ ಸೇವೆ ಸುಧಾರಿಸಲು ಶ್ರಮಿಸಲಾಗುತ್ತಿದೆ ಎಂದು ಹೇಳಿದರು.

ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆ ಪ್ರಾಂಶುಪಾಲರಾದ ಡಾ.ಆರ್. ಸುಮಾ, ಚೆನ್ನೈನ ಶ್ರೀರಾಮಚಂದ್ರ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ರಿಜಿಸ್ಟ್ರಾರ್ ಪ್ರೊ.ರೂಪಾ ನಾಗರಾಜನ್, ಮುಂಬೈನ ಅಲಿಯವರ್ ಜಂಗ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಡಿಸೇಬಿಲಿಟೀಸ್ ಮಾಜಿ ನಿರ್ದೇಶಕ ಪ್ರೊ.ರಂಗಸಾಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net