

ಸೊರಬ: ಷೇರುದಾರರ ಮತ್ತು ಸದಸ್ಯರ ಉತ್ತಮ ವಹಿವಾಟಿನಿಂದ ಸಂಘವು ಲಾಭಾಂಶದಲ್ಲಿ ಮುನ್ನೆಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಂಘದಿಂದ ವಾಣಿಜ್ಯ ಮಳಿಗೆ ಮತ್ತು ಪೆಟ್ರೋಲ್ ಬಂಕ್ ನಿರ್ಮಾಣ ಸೇರಿದಂತೆ ಸಂಘದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ರಾಜೇಂದ್ರನಾಯ್ಕ ಹೇಳಿದರು.
ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದಲ್ಲಿ 381 ಷೇರುದಾರರಿದ್ದು 9.16 ಲಕ್ಷ ರೂ. ವಹಿವಾಟು ನಡೆಸಲಾಗಿದೆ. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಸಂಘದ ಶ್ರೇಯೋಭಿವೃದ್ಧಿಗಾಗಿ, ದೂರದೃಷ್ಠಿಯಿಂದ ಸಂಘದ ಖಾಲಿ ನಿವೇಶನದ ಅತಿಕ್ರಮ ನಡೆಯದಂತೆ ಕಾಂಪೌಂಡ್ ನಿರ್ಮಿಸಲಾಗುವುದು. ಸಂಘದ ಆರ್ಥಿಕ ಚಟುವಟಿಕೆ ಹೆಚ್ಚಿಸಲು ಪೆಟ್ರೋಲ್ ಬಂಕ್ ತೆರೆಯಲು ಆಡಳಿತ ಮಂಡಳಿಯಲ್ಲಿ ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ. ಮುಖ್ಯವಾಗಿ ನ್ಯಾಯಾಲಯದ ಮೆಟ್ಟಿಲೇರಿರುವ ರೈಸ್ ಮಿಲ್ ಘಟಕವು ಸಂಘದ ಸುಪರ್ದಿಗೆ ದೊರೆಯುವ ವಿಶ್ವಾಸವಿದೆ ಎಂದರು.
ಡಿಸಿಸಿ ಬ್ಯಾಂಕ್‌ನಿಂದ ಸಹಕಾರ ಪಡೆದು ಹಲವು ವಾಣಿಜ್ಯ ಮಳಿಗೆ ನಿರ್ಮಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಕೃಷಿ ಉಪಕರಣಗಳ ಮಾರಾಟ ಮಳಿಗೆ ತೆರೆಯಲು ಉದ್ದೇಶಿಸಲಾಗಿದೆ. ಸಂಘದ ಕಾರ್ಯಚಟುವಟಿಕೆ ನಡೆಸಲು ಮತ್ತು ಸಂಘದ ಅಭಿವೃದ್ಧಿಗೆ ಭವನ ನಿರ್ಮಿಸಲು ಕ್ಷೇತ್ರದ ಶಾಸಕರಾದ ಸಚಿವ ಮಧು ಬಂಗಾರಪ್ಪ ಅವರಲ್ಲಿ ಮನವಿ ಮಾಡಲಾಗಿದೆ. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯದರ್ಶಿ ಕೃಷ್ಣ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷ ಎನ್.ಬಿ.ಹಿರಣ್ಯಪ್ಪ ಕಲ್ಲಂಬಿ, ನಿರ್ದೇಶಕರಾದ ಕೀರ್ತಿರಾಜ ಕಾನಳ್ಳಿ, ಎಲ್.ಜಿ.ರಾಜಶೇಖರ ಕುಪ್ಪಗಡ್ಡೆ, ಎಚ್.ಕೆ.ಜಯಶೀಲಗೌಡ, ಎಚ್.ರಾಜಪ್ಪ, ಬಿ.ನಾಗರಾಜಗೌಡ, ಎಚ್.ಯೂಸ್ೂ ಸಾಬ್, ಟಿ.ಹನುಮಂತಪ್ಪ, ಕೆ.ವೈ.ಸುರೇಶ್, ಚಿತ್ರಮ್ಮ, ಸೌಭಾಗ್ಯಾ, ಭೈರಪ್ಪ, ಸಿಬ್ಬಂದಿ ವನಜಾಕ್ಷಮ್ಮ, ಕುಮಾರ್, ಉಷಾ ಇತರರಿದ್ದರು.