

ಹರಿಹರ: ಸರ್ಕಾರದಿಂದ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಜಾರಿ ಮಾಡಿರುವ ಯೋಜನೆಗಳನ್ನು ಫಲಾನುಭವಿಗಳು ಮಧ್ಯಸ್ಥಗಾರರಿಲ್ಲದೆ ಪಡೆಯಬಹುದಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸೈಯದ್ ಜುನೇದ್ ಪಾಷಾ ಹೇಳಿದರು.
ಕರ್ನಾಟಕ ರಾಜ್ಯ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದಿಂದ ನಗರದ ಗುರುಭವನದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ಕೆಎಂಡಿಸಿ) ಸೌಲಭ್ಯಗಳ ಕುರಿತು ಕಾರ್ಯಾಗಾರ ಹಾಗೂ ನಿವೃತ್ತ ಸರ್ಕಾರಿ ನೌಕರರಿಗೆ ಬೀಳ್ಕೊಡುಗೆ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ತಮ್ಮ ಮೊಬೈಲ್ ಫೋನ್‌ನಿಂದಲೆ ಅರ್ಜಿ ಹಾಕಬಹುದು. ನಿಗಮದಲ್ಲಿ ಸ್ವ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಉತ್ತಮ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಈ ಯೋಜನೆಗಳ ಲಾಭ ಪಡೆಯಲು ಅರ್ಹ ಇರುವವರು ಅರ್ಜಿ ಹಾಕಲು ಯಾವ ಮಧ್ಯಸ್ಥಗಾರರ ಸಹಾಯ ಪಡೆಯುವ ಅಗತ್ಯವಿಲ್ಲ ಎಂದರು.
ಆಸಕ್ತರು ನಿಗಮ ವೆಬ್‌ಸೈಟಿನ ಮೂಲಕವಾಗಲಿ ಅಥವಾ ದಾವಣಗೆರೆ ಕುರುಬರ ಹಾಸ್ಟೆಲ್ ಕಟ್ಟಡದಲ್ಲಿರುವ ನಿಗಮದ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಮಾಹಿತಿಗೆ ಮೊ.ಸಂಖ್ಯೆ 9964085517 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಉದ್ಯಮಿ ಕೆ.ಕೆ.ರಫೀಕ್ ಅಹ್ಮದ್ ಮಾತನಾಡಿದರು. ಬಿಇಒ ಎಂ.ಹನುಮಂತಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಬಿಆರ್‌ಸಿ ಕೃಷ್ಣಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಕೃಷ್ಣಪ್ಪ, ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಿ.ಅಶ್ಫಾಖ್, ಕಾರ್ಯದರ್ಶಿ ಇರ್ಷಾದ್ ಅಲಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಸಲಾಂ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಎ.ಕೆ.ಭೂಮೇಶ್, ಎಚ್.ಚಂದ್ರಪ್ಪ, ಶರಣಕುಮಾರ್ ಹೆಗಡೆ, ರೇವಣಸಿದ್ದಪ್ಪ ಅಂಗಡಿ, ಈಶಪ್ಪ ಬೂದಿಹಾಳ್, ರಿಯಾಜ್ ಅಹ್ಮದ್ ಹಾಗೂ ಇತರರಿದ್ದರು. ಸಮಾರಂಭದಲ್ಲಿ ನಿವೃತ್ತ ಸರ್ಕಾರಿ ನೌಕರರಿಗೆ ಹಾಗೂ ಸಾಧಕರಿಗೆ ಸನ್ಮಾನಿಸಲಾಯಿತು.