

ಮೈಸೂರು: ನಗರದಲ್ಲಿ ರಾತ್ರಿ 1 ಗಂಟೆಯವರೆಗೂ ನೂತನ ವರ್ಷಾಚರಣೆಗೆ ಅವಕಾಶ ನೀಡಲಾಗಿದ್ದು, ಎಲ್ಲರೂ ಸರ್ಕಾರ ನಿಗದಿಪಡಿಸಿರುವ ಸಮಯ ಪಾಲಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಎಚ್ಚರಿಸಿದ್ದಾರೆ.
ನಗರದ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೋಂ ಸ್ಟೇ, ಸರ್ವಿಸ್ ಅಪಾರ್ಟ್ಮೆಂಟ್, ಅಪಾರ್ಟ್ಮೆಂಟ್ ಅಸೋಸಿಯೇಷನ್, ಮಾಲ್ಸ್, ಸಂಘ ಸಂಸ್ಥೆಗಳು ಕಡ್ಡಾಯವಾಗಿ ರಾತ್ರಿ 1 ಗಂಟೆಗೆ ಕಾರ್ಯಕ್ರಮ ಮುಗಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೊಸ ವರ್ಷಾಚರಣೆ ನೆಪದಲ್ಲಿ ಅಸಭ್ಯ ವರ್ತನೆಯನ್ನು ಯಾರೂ ಮಾಡಬಾರದು. ಈ ಸಂಬಂಧ 36 ವಿಶೇಷ ಕಾರ್ಯಪಡೆ ತಂಡ ರಚನೆ ಮಾಡಲಾಗಿದೆ. ಮಹಿಳೆಯರ ರಕ್ಷಣೆಗಾಗಿ 8 ಸುರಕ್ಷತಾ ಪಿಂಕ್ ಗರುಡ (ಚಾಮುಂಡಿ ಪಡೆ) ರಚನೆ ಮಾಡಿದ್ದೇವೆ. ನಗರದ ಪ್ರಮುಖ ಸ್ಥಳಗಳಲ್ಲಿ ಶ್ವಾನದಳ ಮತ್ತು ವಿಧ್ವಂಸಕ ಕೃತ್ಯ ತಡೆಗಾಗಿ 4 ತಂಡ ರಚನೆ ಮಾಡಲಾಗಿದೆ. ನಗರದಲ್ಲಿರುವ 59 ಸಿಸಿ ಕ್ಯಾಮರಾಗಳ ಜತೆಗೆ ಹೆಚ್ಚುವರಿ 275 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ವ್ಹೀಲಿಂಗ್, ಓವರ್ ಸ್ಪೀಡ್, ಕರ್ಕಶ ಶಬ್ದ, ಕುಡಿದು ವಾಹನ ಚಾಲನೆ ತಡೆಗಾಗಿ ಸಂಚಾರ ಪೊಲೀಸರು, ತಜ್ಞರನ್ನೊಳಗೊಂಡ ಕ್ಷಿಪ್ರ ಪಡೆ ರಚನೆ ಮಾಡಲಾಗಿದೆ. ರಿಂಗ್ ರಸ್ತೆಯಲ್ಲಿ 8 ಹೈವೇ ಪೆಟ್ರೋಲಿಂಗ್ ವಾಹನಗಳು ನಿಯೋಜನೆ ಮಾಡಲಾಗುತ್ತದೆ. ಒಟ್ಟು 18 ಗರುಡ ವಾಹನಗಳು ಗಸ್ತು ತಿರುಗಲಿವೆ ಎಂದು ಮಾಹಿತಿ ನೀಡಿದರು.
ನಗರದ ಹೊರವಲಯದಲ್ಲಿ 12 ಕಡೆ ಚೆಕ್‌ಪೋಸ್ಟ್ ಸ್ಥಾಪನೆ ಮಾಡಲಾಗುತ್ತದೆ. ನಗರದ ಒಳ ಭಾಗದಲ್ಲಿ 18 ಕಡೆ ಚೆಕ್‌ಪೋಸ್ಟ್ ನಿರ್ಮಿಸಿ ಕಿಡಿಗೇಡಿಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತದೆ. ಇನ್ನು ಹೊಸ ವರ್ಷ ಆಚರಣೆಯ ಕಾರ್ಯಕ್ರಮ ಆಯೋಜನೆಗಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಧ್ವನಿವರ್ಧಕಗಳ ಶಬ್ದ ಆ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರಬೇಕು. ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ಅಶ್ಲೀಲ, ಅರೆಬೆತ್ತಲೆ ನೃತ್ಯ, ಮಾದಕ ವಸ್ತುಗಳ ಸೇವನೆ, ಜೂಜಾಟವನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಡಿ.31 ರಂದು ಚಾಮುಂಡಿಬೆಟ್ಟಕ್ಕೆ ಸಂಜೆ 7ರವರೆಗೆ ಮಾತ್ರ ಪ್ರವೇಶ ನೀಡಲಾಗಿದೆ. ರಾತ್ರಿ 9ಕ್ಕೆ ತಾವರೆಕಟ್ಟೆ ಗೇಟ್‌ಬಂದ್ ಮಾಡಲಾಗುತ್ತದೆ. ಚಾಮುಂಡಿಬೆಟ್ಟ ನಿವಾಸಿಗಳಿಗೆ ಇದು ಅನ್ವಯಿಸಲ್ಲ ಎಂದರು.