ಮಾರುತಿ ನಗರ ಅವ್ಯವಸ್ಥೆ ಆಗರ

11SGN01
Published on

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ

ಪಟ್ಟಣದ 23ನೇ ವಾರ್ಡ್​ನ ಮಾರುತಿ ನಗರದಲ್ಲಿ ಸಂಚರಿಸಲು ಸರಿಯಾದ ರಸ್ತೆ, ಕೊಳಚೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ಜನ ಪರದಾಡುವಂತಾಗಿದೆ.

ಮಾರುತಿ ನಗರದಾದ್ಯಂತ ಕಚ್ಚಾ ರಸ್ತೆಗಳಿದ್ದು, ಚರಂಡಿ ವ್ಯವಸ್ಥೆ ಇಲ್ಲವೇ ಇಲ್ಲ. ಮಳೆಯ ಮತ್ತು ಗಲೀಜು ನೀರು ರಸ್ತೆಯ ಮಧ್ಯದಲ್ಲಿ ಮತ್ತು ಮನೆಯ ಬಾಗಿಲು ಸಮೀಪವೇ ಹರಿಯುತ್ತಿದೆ. ತಗ್ಗು ಪ್ರದೇಶದಲ್ಲಿ ಕೊಳಚೆ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ರೋಗ ಹರಡುವ ಭೀತಿ ಉಂಟಾಗಿದೆ. ಮಾರುತಿ ನಗರದಲ್ಲಿನ ಅವ್ಯವಸ್ಥೆಯಿಂದ 100ಕ್ಕೂ ಅಧಿಕ ಕುಟುಂಬಗಳು ರೋಸಿ ಹೋಗಿವೆ.

ವಾರ್ಡ್ ವ್ಯಾಪ್ತಿಯಲ್ಲಿನ ಸಮಸ್ಯೆ ಬಗೆಹರಿಸಬೇಕು ಎಂದು ಕಳೆದ ಮೂರ್ನಾಲ್ಕು ವರ್ಷಗಳಿಂದ ಸ್ಥಳೀಯರು ಪುರಸಭೆ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಮಸ್ಯೆ ಕುರಿತು ಸಚಿವ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ತಂದರೂ ಪುರಸಭೆ ಅಧಿಕಾರಿಗಳು ಮಾರುತಿ ನಗರಕ್ಕೆ ಮೂಲಸೌಕರ್ಯ ಕಲ್ಪಿಸಲು ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಶಾಲೆ ಆರಂಭದ ದಿನಗಳಲ್ಲಿ ಮಕ್ಕಳು ಶಾಲೆಗಳಿಗೆ ಹೋಗಲು ಕೆಸರು ರಸ್ತೆಗಳಲ್ಲಿ ಹರಸಾಹಸ ಪಡಬೇಕು. ಶಾಲಾ ವಾಹನಗಳು ನಗರದ ಒಳಗೆ ಬರುವುದಿಲ್ಲ. ಪಾಲಕರು ಮಕ್ಕಳನ್ನು ದೂರದ ಮುಖ್ಯರಸ್ತೆಯವರೆಗೆ ಬಿಡಲು ಮತ್ತು ಕರೆತರಲು ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಸ್ಥಳೀಯರಾದ ಶಂಕ್ರಪ್ಪ ಕೊಳೆನವರ, ಎಂ.ವಿ. ಪಾಟೀಲ, ಯಲ್ಲಪ್ಪಗೌಡ ಪಾಟೀಲ, ಜಗದೀಶ ಕತ್ತಿ, ಚಂದ್ರು ಹಡಪದ, ಅರವಿಂದ ಗುಡ್ಡಣ್ಣವರ, ಎಸ್.ಕೆ.ಪೊಲೀಸಗೌಡ್ರ, ಆರ್.ಕೆ. ಪೂಜಾರ, ಡಿ.ಬಿ. ಆಲಮಶೆಟ್ರ, ಶಶಿಧರ ಶೇರೆವಾಡ, ಎಸ್.ಎಂ. ಲಂಡೆತ್ತಿನವರ ದೂರಿದ್ದಾರೆ.

ಕಡ್ಡಾಯವಾಗಿ ಎಲ್ಲ ಕರಗಳನ್ನು ವಸೂಲಿ ಮಾಡುವ ಪುರಸಭೆ, ಜನರಿಗೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಲು ಮುಂದಾಗುತ್ತಿಲ್ಲ. ಕೇವಲ ಭರವಸೆ ನೀಡುತ್ತಿದೆ. ಹಳ್ಳಿಗಳಲ್ಲಿ ರೈತರು ಹೊಲಕ್ಕೆ ಹೋಗಲು ಸಹ ಡಾಂಬರ್ ರಸ್ತೆಗಳಿವೆ. ಆದರೆ, ನಮಗೆ ಮನೆಗಳಿಗೆ ಸುರಕ್ಷಿತವಾಗಿ ಹೋಗಲು ರಸ್ತೆಗಳಿಲ್ಲ. ಪುರಸಭೆ ಶೀಘ್ರ ಮೂಲಸೌಕರ್ಯ ಕಲ್ಪಿಸಲು ಮುಂದಾಗಬೇಕು. ಇಲ್ಲದಿ ದ್ದರೆ ಪುರಸಭೆ ಮುಂದೆ ಪ್ರತಿಭಟನೆ ಮಾಡಲಾಗುವುದು.| ಸುರೇಶ ಯಲಿಗಾರ ಸ್ಥಳೀಯ ನಿವಾಸಿಈಗಾಗಲೇ ಮಾರುತಿ ನಗರ ಅಭಿವೃದ್ಧಿಗೆ ಪುರಸಭೆಯಿಂದ 30 ಲಕ್ಷ ರೂ. ವೆಚ್ಚದ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಅಲ್ಲದೆ, ಸಚಿವರು ನೀರಾವರಿ ಇಲಾಖೆಯಿಂದ 10 ಲಕ್ಷ ರೂ. ನೀಡಿದ್ದಾರೆ. ಶೀಘ್ರ ಕಾಮಗಾರಿಗಳು ಆರಂಭವಾಗಲಿವೆ. | ಮಲ್ಲಿಕಾರ್ಜುನಯ್ಯ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net