ಜೀವವಿಜ್ಞಾನ ಕ್ಷೇತ್ರದಲ್ಲಿ ವಿಫುಲ ಅವಕಾಶಗಳು : ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ

jss medical college
Published on

ಮೈಸೂರು: ವಿಶ್ವಾದ್ಯಂತ ಜೀವವಿಜ್ಞಾನ ಕ್ಷೇತ್ರದಲ್ಲಿ ವಿಫುಲವಾದ ಅವಕಾಶಗಳು ಸೃಷ್ಟಿಯಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಹೇಳಿದರು.

ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಬನ್ನಿಮಂಟಪದ ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಆವರಣ ದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸ್ಕೂಲ್ ಆಫ್ ಲೈಫ್‌ಸೈನ್ಸ್‌ನ ಲೆಕ್ಚರ್ ಹಾಲ್ ಕಾಂಪ್ಲೆಕ್ಸ್, ಸ್ಪಾರ್ಕ್‌ಲೇ ಸಿನೆ (ಇನ್‌ಕ್ಯೂಬೇ ಷನ್ ಫೆಸಿಲಿಟಿ) ಮತ್ತು ಔಷಧೀಯ ರಸಾಯನಶಾಸ್ತ್ರ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದರು.

19 ಮತ್ತು 20ನೇ ಶತಮಾನ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕ್ಷೇತ್ರದ್ದಾಗಿತ್ತು. ಆದರೆ, 21ನೇ ಶತಮಾನವು ಜೀವವಿಜ್ಞಾನದ (ಲೈಫ್‌ಸೈನ್ಸ್) ಶತಮಾನವಾಗಿದ್ದು, ಜೀವವಿಜ್ಞಾನಕ್ಕೆ ಹೆಚ್ಚಿನ ಅವಕಾಶಗಳು ಇವೆ. ಈ ಅವಕಾಶ ಕೇವಲ ರಾಜ್ಯ ಹಾಗೂ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ, ವಿಶ್ವದಲ್ಲಿಯೇ ಜೀವವಿಜ್ಞಾನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಬೇಡಿಕೆ ಇದೆ. ಭಾರತೀಯ ವಿದ್ಯಾರ್ಥಿಗಳಿಗೆ ವಿಶ್ವಾದ್ಯಂತ ಬೇಡಿಕೆ ಇದ್ದು, ಇದಕ್ಕೆ ವಿದ್ಯಾರ್ಥಿಗಳಲ್ಲಿರುವ ಶ್ರದ್ಧೆ ಮತ್ತು ಪರಿಶ್ರಮ, ಬದ್ಧತೆ ಕಾರಣ ಎಂದರು.

ಅತ್ಯಾಧುನಿಕ ತಂತ್ರಜ್ಞಾನವು ಮುಂದಿನ ಭವಿಷ್ಯವಾಗಿದೆ. ಸಮಾಜಕ್ಕೆ ಅನುಕೂಲಕರವಾಗುವ ರೀತಿಯಲ್ಲಿ ನಾವು ಏನನ್ನಾದರು ಸಂಶೋಧಿಸಬೇಕು. ನಾವು ನಮ್ಮ ಪರಿಧಿಯಿಂದ ಆಚೆಗೆ ಆಲೋಸುವ ಪ್ರಯತ್ನ ಮಾಡಬೇಕು. ಜನರಿಗೆ ಹೆಚ್ಚು ಅನುಕೂಲವಾಗುವ, ಹೆಚ್ಚು ಸುಸ್ಥಿರತೆ ಹೊಂದಿರುವ, ಜನರ ಕೈಗೆಟುಕುವ ದರದಲ್ಲಿ ದೊರೆಯುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಅವಶ್ಯಕತೆ ಇದೆ. ಕೋವಿಡ್ ಸಂದರ್ಭದಲ್ಲಿ ತಕ್ಷಣ ಲಸಿಕೆಯನ್ನು ಕಂಡು ಹಿಡಿಯಲಾಯಿತು. ಈ ಹಿಂದೆ ಲಸಿಕೆ ತಯಾರಿಸಲು ಹಲವು ವರ್ಷಗಳು ಬೇಕಾಗಿತ್ತು. ಆದರೆ, ಇದೀಗ ಕೇವಲ 2 ವರ್ಷಗಳಲ್ಲಿ ಹೊಸ ಲಸಿಕೆಗಳು ಬರುತ್ತಿವೆ. ಇದಕ್ಕೆ ತಂತ್ರಜ್ಞಾನ ಮುಂದುವರೆದಿರುವುದು ಒಂದು ಕಾರಣವಾದರೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧನೆಯಲ್ಲಿ ತೊಡಗಿರುವುದು ಮತ್ತೊಂದು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಮಕುಲಾಧಿಪತಿ ಡಾ.ಬಿ. ಸುರೇಶ್, ಕುಲಪತಿ ಡಾ. ಸುರೀಂದ್ರ ಸಿಂಗ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net