ಗಣಪತಿಯ ನಾಮಗಳು ಅನೇಕ: ಒಂದೊಂದಕ್ಕೂ ಒಂದೊಂದು ಕಥೆಗಳ ಉಲ್ಲೇಖ...

ganesha
Published on

- ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ಕೇವಲ ಭಾರತವಷ್ಟೇ ಅಲ್ಲದೇ ವಿಶ್ವದಾದ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಲ್ಪಡುವ ಹಬ್ಬ “ಗಣೇಶಚತುರ್ಥಿ”. ಎಲ್ಲ ಹಿಂದೂಗಳು ಅವರವರಿಗೆ ತಕ್ಕಂತೆ ಸಕಲವೈಭವಗಳಿಂದ ಸಂಭ್ರಮದಿಂದ ಭಕ್ತಿಭಾವದಿಂದ ಆಚರಿಸುತ್ತಾರೆ. ಭಾದ್ರಪದಮಾಸದ ಶುಕ್ಲಪಕ್ಷ ಚತುರ್ಥಿಯಂದು ವಿನಾಯಕನ ಹಬ್ಬ.

ಗಣಪತಿಯ ಅನೇಕ ನಾಮಗಳು: ಗಣಪತಿಯನ್ನು “ವಿಘ್ನೇಶ್ವರ” ಎಂದು ಕರೆಯುತ್ತಾರೆ. ವಿಘ್ನಗಳನ್ನು ನಿಯಮಿಸುವವ. ಸಜ್ಜನರಿಗೆ ಬರುವ ಸಕಲವಿಘ್ನಗಳನ್ನು ಪರಿಹರಿಸುವವ. ಅಂತೆಯೇ ದುರ್ಜನರಿಗೆ ವಿಘ್ನಗಳನ್ನು ಒದಗಿಸಲೂ ಸಮರ್ಥ. ಗಣಪತಿಯ ಉಪಾಸ್ಯಮೂರ್ತಿಯಾದ ವಿಶ್ವಂಭರರೂಪಿ ಭಗವಂತನಿಗೆ 19ಮುಖಗಳಿದ್ದು ವಿಶ್ವಂಭರನ ಮಧ್ಯಮುಖ ಗಜಾಕಾರವಾಗಿದೆ. ವಿಶ್ವಂಭರನ ಮಧ್ಯಮುಖದ ವಿಶೇಷೋಪಾಸನೆಯನೆಯಿಂದ ಗಣಪತಿಯು “ಗಜಮುಖ“ನಾಗಿದ್ದಾನೆ.

ಗಣಪತಿಯ ಇನ್ನೊಂದು ಹೆಸರು “ಏಕದಂತ.” ಗಣಪತಿಯ ಒಂದು ದಂತವು ಪೂರ್ಣವಾಗಿದೆ. ಇನ್ನೊಂದು ದಂತವು ಅರ್ಧವಾಗಿದೆ. ಅದಕ್ಕೊಂದು ಪೌರಾಣಿಕ ಹಿನ್ನೆಲೆಯುಂಟು. ಒಂದೊಮ್ಮೆ ಕುಬೇರನಮನೆಯಲ್ಲಿ ಆತಿಥ್ಯ ಸ್ವೀಕರಿಸಿ ಹೊಟ್ಟೆ ತುಂಬ ಉಂಡ ಗಣಪತಿಯ ಹೊಟ್ಟೆಯು ತುಂಬಾ ದೊಡ್ಡದಾಗಿ ಕಾಣುತ್ತಿತ್ತು. ಅದನ್ನು ನೋಡಿದ ಚಂದ್ರ ಅಪಹಾಸಮಾಡಿ ನಗುತ್ತಾನೆ. ಚಂದ್ರನಿಗೆ ತಾನು ಅತಿ ಸುಂದರನೆಂಬ ಗರ್ವಬಂದಿತ್ತು. ಅದರಿಂದ ಕೋಪಗೊಂಡ ಗಣಪತಿ ತನ್ನ ಒಂದು ದಂತವನ್ನು ಕಿತ್ತಿ ಚಂದ್ರನಮೇಲೆ ಎಸೆಯುತ್ತಾನೆ. ಅಂದಿನಿಂದ ಅವನು ಏಕದಂತನಾದ. ಇದರ ಹಿನ್ನೆಲೆಯಲ್ಲಿಯೇ ಗಣೇಶಚತುರ್ಥಿಯಂದು ಚಂದ್ರನನ್ನು ಯಾರೂ ನೋಡಬಾರದು. ನೋಡಿದವರಿಗೆ ಮಿಥ್ಯಾಪವಾದಗಳು ಬರಲಿ ಎಂದು ಗಣಪತಿಯ ಶಾಪವಿದೆ. ಶ್ರೀಕೃಷ್ಣಕಥೆಯಲ್ಲಿಯೂ ಸಹ ಇದರ ಉಲ್ಲೇಖವಿದೆ. ಶ್ರೀಕೃಷ್ಣನು ಚೌತಿಚಂದ್ರನನ್ನು ನೋಡಿದ್ದಕ್ಕಾಗಿಯೇ ಸ್ಯಮಂತಕಮಣಿಯನ್ನು ಕದ್ದ ಮಿಥ್ಯಾಪವಾದ ಬಂದಿತು. ಆದ್ದರಿಂದಲೇ ಚೌತಿಚಂದ್ರನ ದರ್ಶನದ ಹಾಗು ಸಕಲವಿಧ ಅಪವಾದಗಳ ಮುಕ್ತಿಗೆ ಗಣೇಶಚೌತಿಯಂದು ”ಸ್ಯಮಂತಕೋಪಾಖ್ಯಾನದ” ಶ್ರವಣವನ್ನು ಮಾಡಬೇಕು. ಚೌತಿಚಂದ್ರನ ದರ್ಶನದ ಪರಿಹಾರಕ್ಕಾಗಿ ಪಠಿಸುವ ಮಂತ್ರ-
ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾ ರೋಧೀಃ ತವ ಹ್ಯೇಷಃ ಸ್ಯಮಂತಕಃ||

ಸರ್ವದೋಷದೂರನಾದ ಭಗವಂತನಿಗೆ ಶಶಿದರ್ಶನದಿಂದ ಏನೂ ದೋಷವಿಲ್ಲ. ಆದರೂ ಗಣಪತಿಯ ಶಾಪವನ್ನು ಸತ್ಯವಾಗಿಸಲು ತನ್ನನ್ನೇ ದೃಷ್ಟಾಂತವನ್ನಾಗಿಸಿಕೊಂಡ. ಶ್ರೀಕೃಷ್ಣರುಕ್ಮಿಣಿಯರಲ್ಲಿ “ಚಾರುದೇಷ್ಣ“ನೆಂಬ ಹೆಸರಿನಿಂದ ಗಣಪತಿಯು ಅವತರಿಸಿದನು. ಶ್ರೀಕೃಷ್ಣನ ಆಜ್ಞೆಯಂತೆ ಸಾಂಬಮೊದಲಾದ ಅನೇಕ ರಾಕ್ಷಸರನ್ನು ಸಂಹರಿಸಿದನು.

ರಕ್ತಂಬರೋ ರಕ್ತತನುಃ ರಕ್ತಮಾಲ್ಯಾನುಲೇಪನಃ…. ಗಣಪತಿಯ ಮೈಬಣ್ಣ ಕೆಂಪು. ಕೆಂಪುಬಣ್ಣ ಮಣ್ಣಿನ ಸಂಕೇತ. ಪಾರ್ವತಿ ತನ್ನ ರಕ್ತಚಂದನದಿಂದ ಲಿಪ್ತವಾದ ಶರೀರದ ಮಣ್ಣಿನಿಂದ ಗಣೇಶನನ್ನು ಸೃಷ್ಟಿಸಿದ ಸಂಕೇತವೇ ಈ ಕೆಂಪು ಬಣ್ಣ. ಆದ್ದರಿಂದ ವಿನಾಯಕನ ದೇಹ, ವಸ್ತ್ರ, ಧರಿಸಿರುವ ಮಾಲೆ, ಗಂಧ ಎಲ್ಲವೂ ಕೆಂಪುವರ್ಣದ್ದು. ಆದಕ್ಕೆ ದಾಸವಾಳ ಮೊದಲಾದಕೆಂಪು ಹೂಗಳಿಂದ ಪೂಜಿಸುವುದು ಶ್ರೇಷ್ಠ. ಆದ್ದರಿಂದ ಗಣಪತಿಯು ರಕ್ತಾಂಬರ.

ಗಣಪತಿಯನ್ನು “ಕ್ಷಿಪ್ರಪ್ರಸಾದ“ ಎಂದೂ ಕರೆಯುತ್ತಾರೆ. ಏಕೆಂದರೆ ಬೇಡಿದಿಷ್ಟಾರ್ಥಗಳನ್ನು ತ್ವರೆಯಿಂದ ಈಡೇರಿಸುವವನು ಗಣಪತಿ. ಗಣಪತಿಯ ಉಪಾಸನೆಯಿಂದ ಬಹಳಬೇಗನೇ ಫಲಪ್ರಾಪ್ತಿಯಾಗುತ್ತದೆ. ಕ್ಷಿಪ್ರ-ಬೇಗನೆ ಪ್ರಸಾದ- ಬೇಡಿದಿಷ್ಟಾರ್ಥಗಳನ್ನು ಕೊಡುವವ. ಗಣಪತಿ “ಮೋದಕಪ್ರಿಯ“. ಸಿಹಿ ತಿನಿಸಿನ ಪ್ರಿಯ ಎಂದರ್ಥವಲ್ಲ. ಇದೊಂದು ಪುರಾಣೋಕ್ತವಾದ ಖಾದ್ಯ. ಪುರಂದರದಾಸರು, ಕನಕದಾಸರು, ಜಗನ್ನಾಥದಾಸರೇ ಮೊದಲಾದದಾಸಶ್ರೇಷ್ಠರು ಇದನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿಯೂ 21ಮೋದಕಗಳನ್ನು ನಿವೇದಿಸುವುದು ವಿಶೇಷ. ಗಣೇಶನು ತತ್ವನ್ಯಾಸಕ್ರಮದಲ್ಲಿ 21ನೇಯ ದೇವತೆ. ಅದಕ್ಕೆಂದಲೇ ಗಣಪತಿಗೆ 21ಸಂಖ್ಯೆಯು ಪ್ರಿಯವಾದದ್ದು. ಆದ್ದರಿಂದಲೇ ಗಣಪತಿಗೆ 21ನಮಸ್ಕಾರ, 21ಪ್ರದಕ್ಷಿಣೆ, 21ದೂರ್ವಾಸಮರ್ಪಣೆಯು ವಿಶೇಷವಾಗಿದೆ. ಗಣಹೋಮದಲ್ಲಿಯೂ ಸಹ ಮೋದಕದಿಂದ ಸಾವಿರಾರು ಸಂಖ್ಯೆಯ ವಿಶೇಷಾಹುತಿಗಳನ್ನು ಗಣಪತಿಗೆ ನೀಡುವ ಕ್ರಮವು ಶಾಸ್ತ್ರಬದ್ಧವಾಗಿದೆ.

ಆದಿಪೂಜಿಪ ಮೊದಲೊಂದಿಪ: ಶ್ರೀರಾಮಚಂದ್ರನು ಸೇತುಬಂಧನ ಮಾಡುವಾಗ ಮೊದಲು ಗಣಪತಿಯ ಪೂಜೆಮಾಡಿದ ಉಲ್ಲೇಖವಿದೆ. ದೈತ್ಯರನ್ನು ಸಂಹರಿಸಬೇಕೆಂದು ಇಂದ್ರನು ಗಣಪತಿಯನ್ನು ಮೊದಲಿಗೆ ಪೂಜಿಸಿದ್ದನು. ಅಷ್ಟೇ ಅಲ್ಲದೇ ಮಹಾಭಾರತದ ಯುದ್ಧದ ಪ್ರಾರಂಭದಲ್ಲಿ ಶ್ರೀಕೃಷ್ಣನ ಆಜ್ಞೆಯಂತೆ ಚಕ್ರವರ್ತಿಯಾದ ಧರ್ಮರಾಜನು ಮೊದಲು ಗಣಪತಿಯನ್ನು ಆರಾಧಿಸಿದನು. ಇದು ಭವಿಷ್ಯೋತ್ತರಪುರಾಣದಲ್ಲಿ ದಾಖಲಾಗಿದೆ. ತನಗಿಂತಲೂ ಮಿಗಿಲಾದ ದೇವತೆಗಳಿಂದ, ಅಲ್ಲದೇ ಸಾಕ್ಷಾತ್ ಶ್ರೀಹರಿಯ ಅವತಾರನಾದ ಶ್ರೀರಾಮನಿಂದ ಪೂಜಿತನಾದ ವಿಶೇಷಮಹಿಮೆ ಗಣೇಶನದ್ದು. ಶ್ರೀಹರಿಯ ವಿಶೇಷ ಅನುಗ್ರಹಕ್ಕೆ ಪಾತ್ರನಾದವನು. ಆದ್ದರಿಂದ ಇವತ್ತಿಗೂ ಯಾವುದೇ ಶುಭಕಾರ್ಯದಲ್ಲಿ, ನೂತನಕೆಲಸದ ಪ್ರಾರಂಭದಲ್ಲಿ ಮೊದಲು ಗಣಪತಿಯ ಪೂಜೆಯನ್ನು ಮಾಡುತ್ತಾರೆ. ಶಾಲೆಗಳು ಪ್ರಾರಂಭವಾದ ದಿನದಂದು ವಿದ್ಯಾಭಿಮಾನಿಯಾದ ಗಣಪತಿಯನ್ನು ವಿಶೇಷವಾಗಿ ಪೂಜಿಸಿ ಪಾಠಪ್ರಾರಂಭಿಸುತ್ತಾರೆ.

ಪುರಾಣಶಾಸ್ತ್ರಗಳಲ್ಲಿ ಗಣಪತಿ: ಅವ್ಯಾಕೃತಾಕಾಶ ಮತ್ತು ಭೂತಾಕಾಶ ಎಂದು ಆಕಾಶವು ಎರಡುವಿಧವಾಗಿದೆ. ಅವ್ಯಾಕೃತಾಕಾಶಕ್ಕೆ ಸಾಕ್ಷಾತ್ ಶ್ರೀಮಹಾಲಕ್ಷ್ಮೀದೇವಿಯು ಅಭಿಮಾನಿನಿ. ಭೂತಾಕಾಶಕ್ಕೆ ಗಣಪತಿಯು ಅಭಿಮಾನಿ. ಬ್ರಹ್ಮಾಂಡದಲ್ಲಿ ಆಕಾಶ ಹಾಗೂ ಪಿಂಡಾಂಡದಲ್ಲಿ ರಕ್ತಸಂಚಾರ ಹಾಗೂ ಉಸಿರಾಟಕ್ಕೆ ಬೇಕಾದ ಅವಕಾಶವನ್ನು ಒದಗಿಸಿಕೊಡುವವ ಮಹಾಗಣಪತಿ. ಶಬ್ದದ ಅಭಿವ್ಯಕ್ತಿಯಾಗುವುದು ಆಕಾಶದಲ್ಲಿ. ಗಣೇಶ ಆಕಾಶಾಭಿಮಾನಿಯಾದ್ದರಿಂದ ಶಬ್ದಜ್ಞಾನವನ್ನು ನೀಡುವವನು. ಮೂಕರನ್ನು ವಾಗ್ಮಿಗಳನ್ನಾಗಿ ಮಾಡುವನು. ಆದ್ದರಿಂದಲೇ ಪಂಚಮವೇದವೆನಿಸಿದ ಮಹಾಭಾರತವನ್ನು ಬರೆಯುವ ಮಹಾಕಾರ್ಯವನ್ನು ಶ್ರೀವೇದವ್ಯಾಸರು ಮಹಾಗಣಪತಿಗೆ ವಹಿಸಿದರು. ಆದರೆ ಎಲ್ಲಿಯೂ ನಿಲ್ಲದಂತೆ ಗ್ರಂಥವನ್ನು ಹೇಳಬೇಕೆಂದು ಗಣಪತಿ ವ್ಯಾಸರಿಗೆ ಕೇಳಿದಾಗ, ಅವರು ಆಗಲಿ, ಆದರೆ ನಾವು ಹೇಳದ್ದನ್ನೆಲ್ಲ ಅರ್ಥೈಸಿಕೊಂಡೇ ಬರೆಯಬೇಕು ಎಂದು ವ್ಯಾಸರು ಹೇಳಿದರು. ಆದ್ದರಿಂದ ಗಣಪತಿ ಮಹಾಭಾರತದ ಲೇಖಕನಷ್ಟೇ ಅಲ್ಲದೇ ವ್ಯಾಸರಿಂದಲೇ ಕೇಳಿ ಅರ್ಥೈಸಿಕೊಂಡವ. ಆದ್ದರಿಂದಲೇ ಅವನನ್ನು “ಲೇಖಕಾಗ್ರಣೀ” ಎಂದು ಜಗನ್ನಾಥದಾಸರು ಕೊಂಡಾಡಿದ್ದಾರೆ.

ಪ್ರಾರ್ಥನೆ: ಶ್ರೀಹರಿಯಲ್ಲಿ ವಿಶೇಷಭಕ್ತಿ-ವಿಶ್ವಾಸಗಳು ಬರುವಂತೆ ಸುಜ್ಞಾನವನ್ನು ಕರುಣಿಸು ಎಂದು ಗಣಪತಿಗೆ ಪ್ರಾರ್ಥಿಸಬೇಕು. ಬುದ್ಧಿ ವಿದ್ಯೆಗಳಿಗೆ ಅಭಿಮಾನಿಯಾದ ಗಣಪತಿಯಿಂದ ಪ್ರತಿಯಾಗಿ ಅವುಗಳನ್ನೇ ಪ್ರಾರ್ಥಿಸಬೇಕು. ಸಾಧನಮಾರ್ಗದ ವಿಘ್ನಗಳನ್ನು ಪರಿಹರಿಸಿ ಉತ್ತಮಸಿದ್ಧಿಯನ್ನು ನೀಡುವವ ಗಣಪತಿ. ಕೆಟ್ಟವಿಷಯಗಳಲ್ಲಿ ಮನಸ್ಸು ಆಸಕ್ತವಾಗದಂತೆ ಮಾಡುವವ ಗಣಪತಿ. ನಮ್ಮ ಎಲ್ಲ ದೋಷಗಳನ್ನು ಕಳೆದು ಜ್ಞಾನಿಗಳ ಸಹವಾಸವನ್ನೇ ಸದಾ ಕರುಣಿಸಿ ಜ್ಞಾನಕ್ಕೆ ಕಾರಣನಾಗುವವ ಗಣಪತಿ.

ಆಚರಣೆಯ ಹೆಸರಿನಲ್ಲಿ ವಿಡಂಬನೆ ಸಲ್ಲ: ಆಚರಣೆಯ ಹೆಸರಿನಲ್ಲಿ ಸಂಸ್ಕೃತಿಗೆ ಪ್ರಾಚೀನಸಂಪ್ರದಾಯಕ್ಕೆ ಅಪಚಾರ ಬೇಡ. ಗಣಪತಿಹಬ್ಬದ ಪ್ರಯುಕ್ತ ಪೂಜೆ ಸಿಹಿ ಹಂಚುವುದು ಅನ್ನದಾನ ಮತ್ತಿತರ ವಿವಿಧ ಆಚರಣೆ ವಿಹಿತ. ಆದರೆ ಸಂಗೀತಸೇವೆಯ ಹೆಸರಿನಲ್ಲಿ ಪಾಪ್ ಮೊದಲಾದ ಪಾಶ್ಚಾತ್ಯ ಸಂಗೀತಕಾರ್ಯಕ್ರಮವನ್ನು ಏರ್ಪಡಿಸಿ ಗಣಪತಿಯ ಮುಂದೆ ಕಂಡಂತೆ ಕುಣಿಯುವುದು ಎಂದಿಗೂ ಆಚರಣೆಯ ಅಂಗವಲ್ಲ. ಅಂತಹ ಅನಾಚಾರದ ಆಚರಣೆ ಎಂದಿಗೂ ನಮ್ಮ ಸಂಸ್ಕೃತಿಯಲ್ಲಿಲ್ಲ.

ಒಮ್ಮೆ ಹೆಲ್ಮೆಟ್ ಒಂದರ ಜಾಹಿರಾತಿನಲ್ಲಿ ಗಣಪತಿಯ ಚಿತ್ರಹಾಕಿ “ನನಗೆ ಇನ್ನೊಂದು ತಲೆ ಸಿಕ್ಕಿತು, ನಿಮಗೆ ಸಿಗುತ್ತದೆಯೇ? ಹೆಲ್ಮೆಟ್ ಬಳಸಿ… “ ಎಂದು ಓದಿದಾಗ ವಿಡಂಬನೆಯ ಪರಮಾವಧಿ ಎನಿಸಿತು. ವಿಶ್ವಮಾನ್ಯನಾದ ಸರ್ವಧರ್ಮಿಯರಿಂದಲೂ ಪೂಜ್ಯನಾದ ದೇವತೆಯ ಬಗ್ಗೆ ಇಂತಹ ಅವಮಾನಕರ ಮಾತುಗಳನ್ನು ಬಳಸುವುದು ಎಂದಿಗೂ ನಮ್ಮ ಸಂಸ್ಕೃತಿಯಲ್ಲ. ಸಮಾಜಕ್ಕೆ ಸಂದೇಶಕೊಡುವ ಭರದಲ್ಲಿ ಹೀಗೆಲ್ಲ ದೇವತೆಗಳಿಗೆ ಅವಮಾನಿಸುವುದು ಸರಿಯಲ್ಲ. ವ್ಯಾಪಾರದ ಜಾಹೀರಾತುಗಳಲ್ಲಿ, ನಾಟಕ-ಚಲನಚಿತ್ರಗಳಲ್ಲಿ ಸರಾಗವಾಗಿ ದೇವಿ-ದೇವತೆಗಳ ವಿಡಂಬನೆಯನ್ನು ತೋರಿಸುತ್ತಾರೆ. ಇಂತಹ ಅಪಹಾಸ್ಯ ಶ್ರದ್ಧೆಯ ಮೇಲೆ ಆಘಾತಮಾಡುತ್ತದೆ. ಆದ್ದರಿಂದ ಭಕ್ತರು ಧರ್ಮದ ಚೌಕಟ್ಟಿನಲ್ಲಿ, ಎಲ್ಲ ನಿಯಮಗಳನ್ನು ಪಾಲಿಸಿ ಗಣಪತಿಯ ಪೂಜೆ-ಉಪಾಸನಾದಿಗಳನ್ನು ಮಾಡಿದ್ದಲ್ಲಿ ಅದು ಪರಿಪೂರ್ಣವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net