

ಗೋಣಿಕೊಪ್ಪ: ಮೈಸೂರಿನ ಕೊಡವ ಸಮಾಜ ಸಭಾಂಗಣದಲ್ಲಿ ಆಲ್ ಇಂಡಿಯಾ ಶಿಟೋ ರಿಯೋ ಕರಾಟೆ ಯೂನಿಯನ್ ಅಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಅವರು ಆಯೋಜಿಸಿದ್ದ ನ್ಯಾಷನಲ್ ಶಿಟೋ ರಿಯೋ ಆಲ್ ಇಂಡಿಯಾ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಕೊಡಗಿನ ವಿದ್ಯಾರ್ಥಿಗಳು ಹಲವು ಪದಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಎ.ಎಸ್.ಪೊನ್ನಮ್ಮ ಕುಮಿತೆ ವಿಭಾಗದಲ್ಲಿ ಚಿನ್ನ ಪಡೆದುಕೊಂಡಿದ್ದಾರೆ. ಇಳಾ ತಂಗಮ್ಮ ಕುಮಿತೆಯಲ್ಲಿ ಬೆಳ್ಳಿ ಮತ್ತು ಕಥಾ ವಿಭಾಗದಲ್ಲಿ ಕಂಚು, ಶ್ರದ್ಧಾ ಕಥಾ ಮತ್ತು ಕುಮಿತೆಯಲ್ಲಿ ಕಂಚು, ತ್ರಿಷಾ ಕುಮಿತೆಯಲ್ಲಿ ಬೆಳ್ಳಿ, ಕಥಾದಲ್ಲಿ ಕಂಚು, ತಾನಿಕ ನೀಲಮ್ಮ ಕುಮಿತೆಯಲ್ಲಿ ಕಂಚು, ತಿಮ್ಮಯ್ಯ ಹಾಗೂ ಸಮರ್ಥ್ ಕಥಾದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿಗಳಿಗೆ ಗೋಣಿಕೊಪ್ಪದ ಮುಖ್ಯ ಕರಾಟೆ ತರಬೇತುದಾರ, ರಾಷ್ಟ್ರೀಯ ಕರಾಟೆ ಪಟು ಜಮ್ಮಡ ಜೋಯಪ್ಪ, ಸುಮನ್, ತರಬೇತುದಾರರಾದ ಕಾರ್ತಿಕ್ ತರಬೇತಿ ನೀಡಿದ್ದಾರೆ. ಅರುಣ್ ಮಾಚಯ್ಯ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕರಾಟೆ ಪಂದ್ಯಾವಳಿಯನ್ನು ಸಂಸದ ಯದುವೀರ್ ಒಡೆಯರ್ ಉದ್ಘಾಟಿಸಿದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಶಾಸಕ ಮಂತರ್‌ಗೌಡ, ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಸ್ಥಾಪಕಿ ಅಶ್ವಿನಿ ಕರುಂಬಯ್ಯ, ಸೆನ್ಸಾಯಿ ಟಿ.ಎಸ್.ವಾಂಗ್, ಸೆನ್ಸಾಯ್ ಜಾರ್ಜ್ ಟಾನ್ ಉಪಸ್ಥಿತರಿದ್ದರು. ಕರಾಟೆ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳಿಂದ ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.