

ಮೈಸೂರು: ಪ್ರಸಿದ್ಧ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳನ್ನು ಬಿಸಿಲಿನ ಝಳದಿಂದ ರಕ್ಷಿಸಿ, ತಂಪಾಗಿರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಮಾರ್ಚ್ ಎರಡನೇ ವಾರದಲ್ಲಿಯೇ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉಷ್ಣಾಂಶ ದಾಖಲಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರಾಣಿಗಳು ಬಿಸಿಲಿನ ಬೇಗೆ ತಾಳಲಾರದೆ ಸಮಸ್ಯೆ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಣಿಗಳನ್ನು ಬಿಸಿಲಿನ ಝಳದಿಂದ ರಕ್ಷಿಸಿ, ತಂಪಾಗಿಸುತ್ತಿದ್ದಾರೆ.
ಮುಖ್ಯವಾಗಿ ಪ್ರಾಣಿಗಳಿಗೆ ನೀರು ಸಿಂಪಡಣೆ, ಕೊಳಗಳ ನಿರ್ಮಾಣ ಮಾಡಲಾಗಿದೆ. ಹಣ್ಣು ಹಾಗೂ ತಂಪಾದ ಪಾನೀಯ ನೀಡಲಾಗುತ್ತಿದೆ. ಚಿಂಪಾಂಜಿಗಳಿಗೆ ಎಳನೀರು ನೀಡಲಾಗುತ್ತಿದ್ದು, ಕರಡಿಗಳಿಗೆ ಐಸ್‌ಬಾಕ್ಸ್‌ನಲ್ಲಿ ಕಲ್ಲಂಗಡಿ, ಕಿತ್ತಳೆ ಇನ್ನಿತರ ತಾಜಾ ಹಣ್ಣುಗಳನ್ನು ಪ್ರತಿನಿತ್ಯ ನೀಡಲಾಗುತ್ತಿದೆ. ಇನ್ನು ಹುಲಿ, ಸಿಂಹ, ಚಿರತೆಗಳಿಗೆ ಅವುಗಳ ಪ್ರಾಂಗಣದಲ್ಲಿ ಕೊಳಗಳನ್ನು ನಿರ್ಮಿಸಿ ನೀರು ತುಂಬಿಸಲಾಗುತ್ತಿದೆ. ಅಲ್ಲದೆ, ಪ್ರತಿದಿನ ಎರಡು ಬಾರಿ ಕೊಳದ ನೀರನ್ನು ಬದಲಾಯಿಸಲಾಗುತ್ತಿದ್ದು, ಪ್ರಾಣಿಗಳು ಕೊಳದಲ್ಲಿಯೇ ಸ್ನಾನ ಮಾಡುತ್ತಿವೆ.
ಆನೆ ಮತ್ತು ಜಿಂಕೆಗಳಿಗಾಗಿ ಕೆಸರು ಗುಂಡಿ ನಿರ್ಮಿಸಲಾಗಿದೆ. ಈ ಪ್ರಾಣಿಗಳು ಇರುವ ಸ್ಥಳದಲ್ಲಿ ಮಣ್ಣಿಗೆ ನೀರು ಮಿಶ್ರಣ ಮಾಡಿದ್ದು, ಆನೆಗಳು ಕೆಸರನ್ನು ಮೈಮೇಲೆ ಎರಚಿಕೊಂಡು ದೇಹವನ್ನು ತಂಪು ಮಾಡಿಕೊಳ್ಳುತ್ತಿವೆ. ಜಿಂಕೆಗಳು ಕೆಸರಿನಲ್ಲಿ ಕುಳಿತು ತಂಪಾಗುತ್ತಿವೆ. ಈ ಕ್ರಮಗಳಿಂದ ಮೃಗಾಲಯದ ಪ್ರಾಣಿಗಳು ತಂಪು ವಾತಾವರಣವನ್ನು ಅನುಭವಿಸುತ್ತಿವೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು. ಪಕ್ಷಿಗಳಿರುವ ಆವರಣದಲ್ಲೂ ಕೊಳಗಳನ್ನು ನಿರ್ಮಾಣ ಮಾಡಿ ನೀರು ತುಂಬಿಸಲಾಗಿದ್ದು, ಇದರಿಂದ ಪಕ್ಷಿಗಳು ಕೂಲ್ ಆಗಿವೆ. ಪ್ರಾಣಿಗಳಿಗೆ ನೀಡಲಾಗುತ್ತಿದ್ದ ಹಣ್ಣಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ.