

ಬೆಂಗಳೂರು: ಹಲವು ದಿನಗಳಿಂದ ರಾಜ್ಯದಲ್ಲಿ ಸತತವಾಗಿ ಸುರಿಯುತ್ತಿರುವ ಮುಂಗಾರು ಮಳೆ ರೈತರನ್ನು ಅಕ್ಷರಶಃ ಕಂಗೆಡಿಸಿದೆ. ಜತೆಗೆ ವಿವಿಧ ಬೆಳೆಗಳಿಗೆ ರೋಗಬಾಧೆ ಆತಂಕ ಕಾಡುತ್ತಿದೆ.
ಈ ಬಾರಿ 82.48 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈಗಾಗಲೆ 60 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಪೂರ್ಣಗೊಂಡಿದೆ. 23.99 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶಗಳ ಪೈಕಿ 7.94 ಲಕ್ಷ ಹೆಕ್ಟೇರ್ಗಳಲ್ಲಿ ಬಿತ್ತನೆ ಮಾಡಲಾಗಿದೆ. ಆದರೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ರೈತರನ್ನು ಆತಂಕಕ್ಕೀಡು ಮಾಡಿದೆ. ಈರುಳ್ಳಿ, ಕಾಫಿ ಬೆಳೆಗಳಿಗೆ ಕೊಳೆರೋಗ ಹಬ್ಬುತ್ತಿದೆ. ಕಾಫಿ ಬೆಳೆಗಾರರು ಮಳೆಗಾಲಕ್ಕೂ ಮುನ್ನ ಮುಗಿಸಬೇಕಿದ್ದ ಮರಗಸಿ, ಗಿಡಗಸಿ, ಕೊಟ್ಟಿಗೆ ಗೊಬ್ಬರ ನೀಡುವುದು ಸೇರಿ ಹಲವು ಕೆಲಸಗಳು ಬಾಕಿ ಉಳಿದಿವೆ. ಕಾಫಿ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವ ಕೆಲಸವನ್ನು ಮಳೆ ಮಧ್ಯೆಯೇ ಹಲವು ತೋಟಗಳಲ್ಲಿ ಆರಂಭಿಸಲಾಗಿದೆ. ಆದರೂ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕ್ರಿಮಿನಾಶಕ ಸಿಂಪಡಿಸಿದ್ದರೂ ಪ್ರಯೋಜನ ಇಲ್ಲದಂತಾಗಿದೆ. ಜನವರಿ ಅಥವಾ ಫೆಬ್ರವರಿಯಲ್ಲಿ ಬಿತ್ತಿರುವ ಶುಂಠಿಗೆ ಐದಾರು ತಿಂಗಳು ತುಂಬುತ್ತಿದೆ. ಈಗಾಗಲೇ ಎರಡೆರಡು ಬಾರಿ ಔಷಧ ಸಿಂಪಡಿಸಿಕೊಂಡು ಶುಂಠಿ ಬೆಳೆ ಕಾಪಾಡಿಕೊಂಡು ಬರಲಾಗಿದೆ. ಆದರೆ, ಸತತ ಮಳೆಯಿಂದಾಗಿ ಶುಂಠಿಗೆ ಕೊಳೆರೋಗ ಕಾಣಿಸಿಕೊಂಡಿದೆ. ಮೊಕ್ಕಜೋಳದ ಎಲೆಗಳು ಹಳದಿ ರೋಗಕ್ಕೆ ತಿರುಗಿದೆ.
ಹಲವು ಬೆಳೆಗಳು ನೀರು ಪಾಲು
ಮಂಡ್ಯ, ಮೈಸೂರಿನಲ್ಲಿ ಭತ್ತ, ಮುಸುಕಿನ ಜೋಳ, ಅಲಸಂದೆ, ಉದ್ದು, ಹೊಗೆಸೊಪ್ಪು ಬೆಳೆಗೆ ಹಾನಿಯಾಗಿದೆ. ಕೃಷ್ಣರಾಜಸಾಗರ, ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆ ನಾಶವಾಗಿದೆ. ಹಾವೇರಿಯಲ್ಲಿ ಮೆಣಸಿನಕಾಯಿ, ಹತ್ತಿ, ಶೇಂಗಾ, ಗೋವಿನಜೋಳ ಸೇರಿ ತೋಟಗಾರಿಕಾ ಬೆಳೆಗಳಿಗೆ ಹಾನಿಗೀಡಾಗಿದೆ. ಗದಗದಲ್ಲಿ ಸೂರ್ಯಕಾಂತಿ, ಧಾರವಾಡದಲ್ಲಿ ಹೆಸರು, ಸೋಯಾ, ಬಾಗಲಕೋಟೆಯಲ್ಲಿ ಹೆಸರು, ಸೂರ್ಯಕಾಂತಿ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಭತ್ತ, ಕಲಬುರಗಿಯಲ್ಲಿ ತೋಗರಿ, ಚಿಕ್ಕಬಳ್ಳಾಪುರದಲ್ಲಿ ಮುಸುಕಿನ ಜೋಳ, ಕೋಲಾರದಲ್ಲಿ ಟೊಮೊಟೋ, ರಾಯಚೂರಿನಲ್ಲಿ ಹತ್ತಿ ಬೆಳೆಯು ನೀರು ಪಾಲು ಆಂತಕ ಶುರುವಾಗಿದೆ.
ಶೇ.76 ಅಧಿಕ ಮಳೆ
ವಾರದಿಂದ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಜು.12ರಿಂದ ಜು.18ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 64 ಮಿಮೀ ಮಳೆ ಸುರಿಯಬೇಕಿತ್ತು. ಆದರೆ, 113 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.76 ಹೆಚ್ಚು ವರ್ಷಧಾರೆಯಾಗಿದೆ. ಬೆಂ. ಗ್ರಾಮಾಂತರ, ಚಿಕ್ಕಬಳ್ಳಾಪುರ, ವಿಜಯನಗರ ಹೊರತುಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.