

ಶ್ರವಣ್‌ಕುಮಾರ್ ನಾಳ, ಮಂಗಳೂರು
ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿ 1980ರಲ್ಲಿ ಸ್ವತಂತ್ರ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡ ಮಂಗಳೂರು ವಿವಿ ಇದೇ ಮೊದಲ ಬಾರಿಗೆ ಹಲವು ಕೋರ್ಸ್‌ಗೆ ಶೂನ್ಯ ದಾಖಲಾತಿ ಎದುರಾಗಿದ್ದು, ಮುಂದಿನ ವರ್ಷವೂ ಇದೇ ರೀತಿ ಮುಂದುವರಿದರೆ ಹಲವು ವಿಭಾಗಗಳು ಶಾಸ್ವತ ಮುಚ್ಚುವ ಭೀತಿಯಲ್ಲಿದೆ.
ವಿವಿಯಲ್ಲಿ 28 ವಿಭಾಗಗಳು ಇದ್ದು, ಒಟ್ಟು 42 ವಿವಿಧ ಕೋರ್ಸ್‌ಗಳು ಲಭ್ಯವಿವೆ. ಲಭ್ಯ ಮಾಹಿತಿಯಂತೆ ಮಂಗಳೂರು ವಿಶ್ವವಿದ್ಯಾನಿಲಯದ 2024-25ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಪೈಕಿ 9ಕ್ಕೂ ಹೆಚ್ಚು ಕೋರ್ಸ್‌ಗಳಿಗೆ ಈವರೆಗೆ ಒಬ್ಬರೂ ಪ್ರವೇಶ ಪಡೆದಿಲ್ಲ. ಪ್ರವೇಶ ಹೆಚ್ಚಿಸಲು ಅರ್ಜಿ ಸಲ್ಲಿಕೆಯ ದಿನಾಂಕವನ್ನು ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು. ಮೊದಲ ಬಾರಿ ಇದ್ದ ದಿನಾಂಕವನ್ನು ಸೆ. 25ರವರೆಗೆ ವಿಸ್ತರಿಸಿ, ನಂತರ ಮತ್ತೊಮ್ಮೆ ಅ.10ರವರೆಗೆ ವಿಸ್ತರಿಸಲಾಗಿತ್ತು. ಆದರೂ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿಲ್ಲ.
*ಅಟೊನಮಸ್ ಕಾಲೇಜು ಎಫೆಕ್ಟ್
ಪ್ರಸ್ತುತ ಮಂಗಳೂರು ವಿವಿ ವ್ಯಾಪ್ತಿಯಲ್ಲಿ 132 ಸಂಯೋಜಿಕ ಕಾಲೇಜುಗಳಿದ್ದು, 7 ವಿದ್ಯಾಸಂಸ್ಥೆಗಳು ಸ್ವಾಯತ್ತತೆಯನ್ನೂ ಪಡೆದುಕೊಂಡಿದೆ. ಈಗಾಗಲೇ ಮಂಗಳೂರು ವಿವಿ ನ್ಯಾಕ್ ಗ್ರೇಡ್ ಇಳಿಕೆ, ವಿವಿ ಆಡಳಿತ ವಿಭಾಗದಲ್ಲಿ ಭ್ರಷ್ಟಾಚಾರ, ಭೂಧಕ ವರ್ಗದ ಅಸಮರ್ಪಕ ಕಾರ್ಯನಿರ್ವಹಣೆಯು ಶೈಕ್ಷಣಿಕ ದಾಖಲಾತಿಗೆ ಹೊಡೆತ ಬಿದ್ದಿದೆ. ಇದರ ಜತೆಗೆ ಶೈಕ್ಷಣಿಕ ಹಬ್ ಆಗಿರುವ ದ.ಕ ಜಿಲ್ಲೆಯಲ್ಲಿ ಹಲವು ವಿದ್ಯಾಸಂಸ್ಥೆಗಳು ಸ್ವಾಯತ್ತತೆ ಪಡೆದುಕೊಂಡು ಸಂಶೋಧನೆ ಹಾಗೂ ಉದ್ಯೋಗಕ್ಕೆ ಪೂರಕವಾಗಿರುವ ಹೊಸ ಕೋರ್ಸ್‌ಗಳನ್ನು ಆರಂಭಿಸಿ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಸಫಲವಾಗಿದೆ.
----------------
ಶೈಕ್ಷಣಿಕ ವರ್ಷ ತಾತ್ಕಾಲಿಕ ಬಂದ್!
ಪ್ರತಿ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 15ಕ್ಕಿಂತ ಕಡಿಮೆ ಇದ್ದರೆ, ಅಂತಹ ವಿಭಾಗವನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಾಗ ಪುನಃ ತೆರೆಯುವ ನಿರ್ಧಾರವನ್ನು ವಿವಿ ಕೈಗೊಂಡಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರಸ್ತುತ ಈ ಸಂಖ್ಯೆಯನ್ನು ಇಳಿಕೆ ಮಾಡಿ, ಪ್ರತಿ ವಿಭಾಗದಲ್ಲಿ 10 ಜನರು ಪ್ರವೇಶ ಪಡೆದರೆ ವಿಭಾಗವನ್ನು ಮುಂದುವರಿಸಲು ವಿಶ್ವವಿದ್ಯಾನಿಲಯ ನಿರ್ಧರಿಸಿದೆ. ಪರಿಸರ ವಿಜ್ಞಾನ, ಲೆಕ್ಕಶಾಸ (ಸ್ಟ್ಯಾಟಿಸ್ಟಿಕ್ಸ್), ಎಲೆಕ್ಟ್ರಾನಿಕ್ಸ್, ಎಂ.ಇಡಿ, ಎಂಎಸ್‌ಡಬ್ಲ್ಯು, ಜಿಯೊ ಇನ್ಪೊಮ್ಯಾಟಿಕ್ಸ್, ಮೆಟೀರಿಯಲ್ ಸೈನ್ಸ್ ಸಹಿತ 9ಕ್ಕೂ ಹೆಚ್ಚು ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಲಭ್ಯವಿಲ್ಲ ಎಂಬುದು ವಿಜಯವಣಿಗೆ ಲಭ್ಯ ಮಾಹಿತಿ. ಜತೆಗೆ ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗಕ್ಕೂ ಈ ಬಾರಿ ಕೇವಲ 5 ವಿದ್ಯಾರ್ಥಿಗಳ ದಾಖಲಾತಿಯಾಗಿದ್ದು, ಈ ವಿಭಾಗದ ಪ್ರಥಮ ಶೈಕ್ಷಣಿಕ ವರ್ಷವನ್ನು ತಾತ್ಕಾಲಿಕವಾಗಿ ಈಬಾರಿ ಮುಚ್ಚಲಾಗುತ್ತಿದೆ ಎಂದು ಮಂಗಳೂರು ವಿವಿ ತಿಳಿಸಿದೆ.
---------------
ಅತಿಥಿ ಉಪನ್ಯಾಸಕರು ಅತಂತ್ರ
ಮಂಗಳೂರು ವಿಶ್ವವಿದ್ಯಾನಿಲಯದ 2024-25ನೇ ಸಾಲಿನ ಸ್ನಾತಕೋತ್ತರ ಶೈಕ್ಷಣಿಕ ಕಾರ್ಯಕ್ರಮಕ್ಕೆ 1,800ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರೂ, ಈವರೆಗೆ ಪ್ರವೇಶ ಪಡೆದವರು 680ರಷ್ಟು ಮಾತ್ರ. ಈ ಮಧ್ಯೆ ಎಂ.ಕಾಂ., ರಸಾಯನ ವಿಜ್ಞಾನ, ಬಯೊಟೆಕ್ನಾಲಜಿ ಕಲಿಕೆಗೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರಿದ್ದಾರೆ. ಈ ಕೋರ್ಸ್‌ಗಳಿಗೆ ಗರಿಷ್ಠ ಮಂದಿ ಪ್ರವೇಶ ಪಡೆದಿದ್ದು ಎಂ.ಕಾಂ.ಗೆ ಹೆಚ್ಚು ದಾಖಲಾತಿ ಆಗಿದೆ. ಈಮಧ್ಯೆ ವಿವಿ ಹಲವು ಕೋರ್ಸ್ ಕ್ಲೋಸ್ ಆದ ಕಾರಣ ಅತಿಥಿ ಉಪನ್ಯಾಸಕರ ಸ್ಥಿತಿ ಅತಂತ್ರವಾಗಿದೆ. ಈ ಮಧ್ಯೆ ಖಾಯಾಂ ನೆಲೆಯಲ್ಲಿ ನೇಮಕಗೊಂಡ ಭೋದಕ ಹಾಗೂ ಬೋಧಕೇತರರನ್ನು ಶೈಕ್ಷಣಿಕ ವಿಭಾಗದಿಂದ ಆಡಳಿತ ವಿಭಾಗಕ್ಕೆ ನಿಯೋಜನೆಗೊಳಿಸಲು ವಿವಿ ಸಿಂಡಿಕೇಟ್ ಚಿಂತನೆ ನಡೆಸಿದೆ.
---------------
ಪ್ರತಿ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 15ಕ್ಕಿಂತ ಕಡಿಮೆ ಇದ್ದರೆ, ಅಂತಹ ವಿಭಾಗವನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಸರ್ಕಾರದ ನಿರ್ದೇಶನವಿದೆ. ಈಮಧ್ಯೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರಸ್ತುತ ಈ ಸಂಖ್ಯೆಯನ್ನು ಇಳಿಕೆ ಮಾಡಿ, ಪ್ರತಿ ವಿಭಾಗದಲ್ಲಿ 10 ಜನರು ಪ್ರವೇಶ ಪಡೆದರೆ ವಿಭಾಗವನ್ನು ಮುಂದುವರಿಸಲು ವಿಶ್ವವಿದ್ಯಾನಿಲಯ ನಿರ್ಧರಿಸಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಾಗ ಪುನಃ ತೆರೆಯುವ ನಿರ್ಧಾರವನ್ನು ವಿವಿ ಕೈಗೊಂಡಿದೆ.
ಪ್ರೊ.ಪಿ.ಎಲ್.ಧರ್ಮ, ಕುಲಪತಿ
ಮಂಗಳೂರು ವಿಶ್ವವಿದ್ಯಾಲಯ, ಮಂಗಳಗಂಗೋತ್ರಿ