

ಮಾನ್ವಿ: ಪರಿಸರದಲ್ಲಿನ ಪ್ರತಿ ಜೀವಿ ಪರಸ್ಪರ ಅವಲಂಬಿಸಿದ್ದು, ಇವುಗಳಲ್ಲಿ ವ್ಯತ್ಯಾಸವಾದಾಗ ಜೀವಿಗಳ ಉಳಿಯುವಿಕೆಯ ಮೇಲೆ ಪರಿಣಾಮವಾಗುತ್ತದೆ ಎಂದು ಪಕ್ಷಿ ಪ್ರೇಮಿ ಸಲ್ಲಾವುದ್ದಿನ್ ಹೇಳಿದರು.
ವಿಶ್ವ ಗುಬ್ಬಚ್ಚಿ ದಿನಾಚರಣೆ ನಿಮಿತ್ತ ಪಟ್ಟಣದಲ್ಲಿ ಪಕ್ಷಿ ಪ್ರೇಮಿಗಳ ಸ್ನೇಹಿತರ ಬಳಗದಿಂದ ಹಮ್ಮಿಕೊಂಡಿದ್ದ ಪಕ್ಷಿ ಸಂಕುಲ ಸಂರಕ್ಷಣೆ, ಜಾಗೃತಿ ಅಭಿಯಾನ ಹಾಗೂ ಪೋಷಣಾ ಸಲಕರಣೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿವಿಧ ಬೆಳೆಗಳನ್ನು ನಾಶಮಾಡುವ ಕೀಟಗಳನ್ನು ಗುಬ್ಬಚ್ಚಿಗಳು ಭಕ್ಷಿಸುವ ಮೂಲಕ ಅವುಗಳನ್ನು ಸ್ವಾಭಾವಿಕವಾಗಿ ನಿಯಂತ್ರಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತವೆ. ಗುಬ್ಬಿಗಳು ಮನುಷ್ಯರೊಂದಿಗೆ ಹೊಂದಿಕೊಂಡು ಹೋಗುವ ಸ್ವಭಾವ ಹೊಂದಿವೆ. ಬೇಸಿಗೆ ಆರಂಭವಾಗಿದ್ದು ಪಕ್ಷಿಗಳಿಗಾಗಿ ಮನೆಗಳ ಮೇಲೆ ಕುಡಿವ ನೀರು, ಆಹಾರದ ವ್ಯವಸ್ಥೆ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ನಂತರ ಬಳಸಿ ಬಿಸಾಡಿದ ಬಾಟಲಿಗಳಿಂದ ಪಕ್ಷಿಗಳಿಗೆ ನೀರುಣಿಸುವ ಸಾಧನಗಳನ್ನು ತಯಾರಿಸುವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು. ನೇತಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಇ.ನರಸಿಂಹ, ಕಾರ್ಯದರ್ಶಿ ವಿಜಯಲಕ್ಷ್ಮೀ, ಮುಖ್ಯಶಿಕ್ಷಕಿ ಅನೀಸ್ ಫಾತಿಮಾ, ರಹೀಂಪಾಷಾ ಇತರರಿದ್ದರು.