

ಮಾನ್ವಿ: ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ, ಧ್ಯಾನ ಮತ್ತು ಸರಿಯಾದ ಜೀವನ ಕ್ರಮ ಮುಖ್ಯ ಎಂದು ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಕಲ್ಮಠ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಲಿಂ.ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಸ್ಮರಣಾರ್ಥ ಸಾಮರ್ಥ್ಯ ಸಂಸ್ಥೆ ಕೊಪ್ಪಳ, ಎಪಿಡಿ ಸಂಸ್ಥೆ ಬೆಂಗಳೂರು, ಸರ್ಕಾರಿ ಆಸ್ಪತ್ರೆ, ರಾಜ್ಯ ಅಂಗವಿಕಲರ ಆರ್‌ಪಿಡಿ ಟಾಸ್ಕ್ ಫೋರ್ಸ್ ತಾಲೂಕು ಸಮಿತಿ, ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಹಾಗೂ ಶಿಕ್ಷಕ ಸುರೇಶ ಕುರ್ಡಿ ಸಹಯೋಗದಲ್ಲಿ ಅಪಘಾತಗಳಿಂದ ಬೆನ್ನುಹುರಿ ತೊಂದರೆಗಳಿರುವವರಿಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಮತ್ತು ಫಿಸಿಯೋಥೆರಪಿ ಉಚಿತ ಶಿಬಿರ ಉದ್ಘಾಟಿಸಿ ಗುರುವಾರ ಮಾತನಾಡಿದರು.
ತೊಂದರೆಗಳು ಬಂದಾಗ ಧೈರ್ಯ ಕಳೆದುಕೊಳ್ಳದೆ ಕಷ್ಟಗಳಿಂದ ಹೋರಬರಲು ಪ್ರಯತ್ನಿಸಿದಾಗ ಮಾತ್ರ ಬದುಕನ್ನು ಸುಂದರವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕೊಪ್ಪಳದ ಸಾಮರ್ಥ್ಯ ಸಂಸ್ಥೆಯ ತರಬೇತುದಾರ ಡೇವಿಡ್ ಮಾತನಾಡಿ, ಅಪಘಾತಗಳಿಂದ ಬೆನ್ನುಹುರಿಗೆ ತೊಂದರೆಯಾದವರಿಗಾಗಿ ಸಂಸ್ಥೆ ವತಿಯಿಂದ 3 ದಿನಗಳ ಕಾಲ ರೋಗಿಗಳಿಗೆ ಹಾಗೂ ಪಾಲಕರಿಗೆ ತರಬೇತಿ ನೀಡಲಾಗುವುದು ಹಾಗೂ ಪಾರ್ಶ್ವವಾಯು ಪೀಡಿತರಿಗೆ ಶಿಬಿರದಲ್ಲಿ ನುರಿತ ಪಿಸಿಯೋ ಥೆರಪಿಸ್ಟ್‌ರಿಂದ ಆರೋಗ್ಯ ತಪಾಸಣೆ, ಮಲಮೂತ್ರ ನಿಯಂತ್ರಣ ಮತ್ತು ನಿರ್ವಹಣೆ ಮತ್ತು ಗಾಯಾಳುಗಳಿಗೆ ಡ್ರೆಸಿಂಗ್ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಶಿಬಿರದಲ್ಲಿ 40ಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಆಯುಷ್ ಅಧಿಕಾರಿ ಡಾ.ಅಂಬಿಕಾ ಮಧುಸೂಧನ, ಅನ್ನದಾನಯ್ಯಸ್ವಾಮಿ, ವಾಜೀದ್‌ಖಾದ್ರಿ, ಹನುಮಂತ, ಅಯ್ಯಳಪ್ಪ, ಹನುಮೇಶ, ಶಿಕ್ಷಕ ಸುರೇಶ ಕುರ್ಡಿ, ಕೊಪ್ಪಳದ ಸಾಮರ್ಥ್ಯ ಸಂಸ್ಥೆಯ ಅಧಿಕಾರಿ ಮೆಹಬೂಬ್, ಶಿವು ಚಲಮಲ್ ಇತರರಿದ್ದರು.