

ಶುದ್ಧೀಕರಿಸದ ನೀರು ಕುಡಿಯದಂತೆ ಎಚ್ಚರಿಕೆ ಸಮಸ್ಯೆಯಿದ್ದರೆ ಚಿಕಿತ್ಸೆ ಪಡೆಯುವಂತೆ ಜನರಲ್ಲಿ ಮನವರಿಕೆ
ಮಾನ್ವಿ: ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥಗೊಂಡಿರುವ ತಾಲೂಕಿನ ವಲ್ಕಂದಿನ್ನಿ ಮತ್ತು ಜೂಕೂರು ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಮಂಗಳವಾರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಮನೆಮನೆಗೆ ತೆರಳಿ ಸಲಹೆ ನೀಡಿದರು.
ಶುದ್ಧೀಕರಿಸದ ಅಥವಾ ಕೆರೆ-ಕುಂಟೆಗಳ ನೀರನ್ನು ನೇರವಾಗಿ ಕುಡಿಯಬಾರದು, ಕೈಗಳನ್ನು ತೊಳೆದುಕೊಳ್ಳದೆ ಆಹಾರವನ್ನು ಸೇವಿಸಬಾರದು. ನೀರಿನ ಸಂಗ್ರಹಗಳ ಮೇಲೆ ಮುಚ್ಚಳದಿಂದ ಮುಚ್ಚಿಡಬೇಕು. ಬಯಲುಗಳಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಬಾರದು. ರಸ್ತೆ ಬದಿ ಮಾರಾಟ ಮಾಡುವ ತೆರೆದಿಟ್ಟ ಆಹಾರ ಸೇವನೆ ಮಾಡಬೇಡಿ. ಊಟದ ಮೊದಲು ಶೌಚಗೃಹದ ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು ಎಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.