

ಮಾನ್ವಿ: ಮಾನ್ವಿ: ಗ್ರಾಮೀಣ ಪ್ರದೇಶ ಜನರು ಕಂದಾಯ ಮತ್ತು ಇತರ ಇಲಾಖೆಗಳ ಸೌಲಭ್ಯಗಳನ್ನು ಪಡೆಯಲು ನಗರ ಪ್ರದೇಶಗಳಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಆಯೋಜಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ್ ತಿಳಿಸಿದರು.
ರಬ್ಬಣಕಲ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಪಹಣಿಯಲ್ಲಿನ ತಿದ್ದುಪಡಿ, ಪೋತಿ, ಪೋಡಿ, ಆಕರಬಂದಿ ಹಾಗೂ ಗ್ರಾಮಕ್ಕೆ ಅಗತ್ಯ ಸೌಲಭ್ಯಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಿ ಪರಿಹಾರ ಪಡೆಯಬಹುದು ಎಂದರು.
ಕಂದಾಯ ಇಲಾಖೆಗೆ 16, ತಾಪಂಗೆ 6, ಗಣಿ ಮತ್ತು ಭೂ ವಿಜ್ಞಾನಿ ಇಲಾಖೆಗೆ ಸಂಬಂಧಿಸಿದ 1 ಹಾಗೂ ಶಿಕ್ಷಣ ಇಲಾಖೆಗೆ 5 ಅರ್ಜಿಗಳು ಬಂದಿದ್ದು, ಕಂದಾಯ ಇಲಾಖೆ ಮಾಸಾಶನಕ್ಕೆ ಸಂಬಂಧಿಸಿದ 13 ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ, ತಾಲೂಕು ವೈದ್ಯಾಧಿಕಾರಿ ಚಂದ್ರಶೇಖರಯ್ಯಸ್ವಾಮಿ, ಕೃಷಿ ಅಧಿಕಾರಿ ಸೈಯದ್ ಹುಸೇನಬಾಷಾ ಇತರರಿದ್ದರು.