

ಮಾನ್ವಿ: ಸಂಗೀತ ಕೇಳುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗಿ ಸಕರಾತ್ಮಕ ಭಾವನೆ ಬರಲಿದೆ ಎಂದು ಖ್ಯಾತ ಮಾನಸಿಕ ರೋಗ ತಜ್ಞ ವಿ.ಎ.ಮಾಲಿ ಪಾಟೀಲ್ ಹೇಳಿದರು.
ಪಟ್ಟಣದ ಧ್ಯಾನ ಮಂದಿರದಲ್ಲಿ ಶನಿವಾರ ವಿರೂಪಾಕ್ಷೇಶ್ವರ ವಿದ್ಯಾಕೇಂದ್ರ ಟ್ರಸ್ಟ್, ವಿದ್ಯಾಧರೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ರಾಜಗುರು ಲೋಕ ಕಲ್ಯಾಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ 14ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸ್ವರೋಪಾಸನೆ ಉದ್ಘಾಟಿಸಿ ಮಾತನಾಡಿದರು.
ಶಾಸ್ತ್ರಿಯ ಸಂಗೀತ ಪರಿಕಾರಗಳನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಮನಸ್ಸಿಗೆ ವಿಶ್ರಾಂತಿ ಹಾಗೂ ನೆಮ್ಮದಿ ಸಿಗುತ್ತದೆ. ಅಲ್ಲದೆ ಜ್ಞಾಪಕ ಶಕ್ತಿ ಹೆಚ್ಚಳವಾಗುತ್ತದೆ ಎಂದರು.
ಕಿಡಿಗಣ್ಣಯ್ಯಸ್ವಾಮಿ, ಬ್ರಹ್ಮಯ್ಯ ಶಿಲ್ಪಿ, ಗಾಯಕಿ ಶಾಂತ ಬಲ್ಲಟಗಿ ಅವರನ್ನು ಗೌರವಿಸಲಾಯಿತು. ಎಚ್.ಪುಷ್ಪಾವತಿ ಹೊಸಪೇಟೆ, ಬಾಗಲಕೋಟೆಯ ಜಯತೀರ್ಥ ತಾಸಂಗಾಂವ, ಧಾರವಾಡದ ಬಸವರಾಜ ವಂದಲಿ ಅವರಿಂದ ವಚನಗಾಯನ, ಶಾಸ್ತ್ರಿಯ ಗಾಯನ ನಡೆಯಿತು. ಹುಬ್ಬಳ್ಳಿಯ ಆದಿತ್ಯ ಜೋಶಿ ಅವರ ಬಾನ್ಸೂರಿ ವಾದನ ಗಮನ ಸೆಳೆಯಿತು. ವೀರೇಶ ಹಿಟ್ನಾಳ್, ಮಹಾಂತಸ್ವಾಮಿ ಗೋನ್ವರ ಹಾಮ್ಮೋನಿಯಂ ವಾದನ , ಅಕ್ಷಯಜೋಶಿ ತಬಾಲ ಸಾಥ್ ಮನಕ್ಕೆ ಮುದ ನೀಡಿತು. ರಾಘವೇಂದ್ರ, ವಿರುಪಾಕ್ಷಯ್ಯ ವಂದಲಿ, ಅಮರೇಶ ಸಾಲಿಮಠ ಸೇರಿದಂತೆ ಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ನಡೆದವು.
ವಿದ್ಯಾಧರೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಗೌರವಾಧ್ಯಕ್ಷ ವಿರುಪಾಕ್ಷಯ್ಯ ವಂದಲಿ, ಕಲ್ಮಠ ಕಾಲೇಜಿನ ಉಮಾಶಂಕರ, ವಿರೂಪಾಕ್ಷೇಶ್ವರ ಸಹಕಾರಿ ಸಿಇಒ ಶಂಕರಾನಂದ ಇನ್ನಿತರರಿದ್ದರು.