

ಮಾನ್ವಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ವೈಯಕ್ತಿಕ ಶೌಚಗೃಹ ನಿರ್ಮಾಣಕ್ಕೆ ಹೆಚ್ಚಿನ ಅದ್ಯತೆ ನೀಡಿ ನಿಗದಿತ ಗುರಿ ತಲುಪಬೇಕು ಎಂದು ಆಯಾ ಗ್ರಾಪಂ ಪಿಡಿಒಗಳಿಗೆ ತಾಪಂ ಇಒ ಮಂಜುಳಾ ಹಕಾರಿ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳು ಸ್ವಚ್ಛತಗೆ ಆದ್ಯತೆ ನೀಡಬೇಕು. ಕಸ ವಿಲೆವಾರಿ ಮಾಡುವುದಕ್ಕೆ ವಿಲೇವಾರಿ ಘಟಕಗಳನ್ನು ನಿರ್ಮಾಣ ಮಾಡಬೇಕು. ಭೋಗಾವತಿ ಗ್ರಾಪಂ ವತಿಯಿಂದ ಕಸ ವಿಲೇವಾರಿ ಘಟಕದ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಬೇಗನೆ ಪೂರ್ಣಗೊಳಿಸಬೇಕು. ಮದ್ಲಾಪೂರು ಹಾಗೂ ಸಾದಪೂರು ಗ್ರಾಪಂನಲ್ಲಿ ಕಸ ವಿಲೇವಾರಿ ಘಟಕದ ನಿರ್ಮಾಣಕ್ಕೆ ಸ್ಥಳದ ಸಮಸ್ಯೆ ಇದ್ದು, ಕೂಡಲೇ ಸ್ಥಳ ಸಮಸ್ಯೆ ಪರಿಹರಿಸಬೇಕು ಎಂದರು.
ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಜನರಿಗೆ ಶುದ್ಧ ಕುಡಿವ ನೀರನ್ನು ಪೂರೈಸುವುದಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರನ್ನು ಸಂಗ್ರಹಿಸುವ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು. ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಮಾಹಿತಿ ನೀಡಿದಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಇ-ಹಾಜರಾತಿ ಮೂಲಕ ಹಾಜರಿ ಹಾಕುವಂತೆ ಸೂಚನೆ ನೀಡಿದರು.
ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಖಾಲೀದ್ ಅಹಮ್ಮದ್ ಮಾತನಾಡಿ, ಖಾತ್ರಿ ಯೋಜನೆಯಡಿ ಗ್ರಾಮಗಳಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲ ಕೂಲಿ ಕಾರ್ಮಿಕರಿಗೂ ಕೆಲಸ ನೀಡಬೇಕು 200 ಕೂಲಿ ಕಾರ್ಮಿಕರಿಗಿಂತ ಕಡಿಮೆ ಇಲ್ಲದಂತೆ ಕೆಲಸ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆದ್ಯತೆ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಪಂಚಾಯತ್ ರಾಜ್ ಸಹಾಯಕ ನಿರ್ದೇಶಕಿ ದೀಪಾ, ವಿವಿಧ ಗ್ರಾಪಂ ಪಿಡಿಒ, ಕಾರ್ಯದಶಿಗಳು, ಕರವಸೂಲಿಗಾರರು, ಡಿಇಒ ಹಾಗೂ ನರೇಗಾ ಸಿಬ್ಬಂದಿ ಇದ್ದರು.