ಸಕ್ಕಿಂಗ್ ಯಂತ್ರ ನಿರುಪಯುಕ್ತ : ಮಾನ್ವಿಯಲ್ಲಿ 13 ವರ್ಷಗಳಿಂದ ತುಕ್ಕು ಹಿಡಿಯುತ್ತಿರುವ ಮಷಿನ್

ಮಾನ್ವಿ ತಾಪಂ ಕಚೇರಿ ಅವರಣದಲ್ಲಿ ಧೂಳಿಡಿದಿರುವ ಸಕ್ಕಿಂಗ್ ಮಷಿನ್ ಮತ್ತು ಟ್ರ್ಯಾಕ್ಟರ್.
ಮಾನ್ವಿ ತಾಪಂ ಕಚೇರಿ ಅವರಣದಲ್ಲಿ ಧೂಳಿಡಿದಿರುವ ಸಕ್ಕಿಂಗ್ ಮಷಿನ್ ಮತ್ತು ಟ್ರ್ಯಾಕ್ಟರ್.
Published on

ಮಾನ್ವಿ: ಇಲ್ಲಿನ ತಾಲೂಕು ಪಂಚಾಯಿತಿಗೆ 13 ವರ್ಷಗಳ ಹಿಂದೆ ನೀಡಿದ್ದ ಟ್ರ್ಯಾಕ್ಟರ್ ಹಾಗೂ ಸಕ್ಕಿಂಗ್ ಯಂತ್ರವು ಬಳಸದ ಕಾರಣ ತಾಪಂ ಅವರಣದಲ್ಲೇ ತುಕ್ಕು ಹಿಡಿಯುತ್ತಿವೆ.

ಜಿಲ್ಲಾ ಪಂಚಾಯಿತಿಯಿಂದ 2012ರಲ್ಲಿ ನಿರ್ಮಲ ಭಾರತ ಅಭಿಯಾನದಡಿ ಅಂದಾಜು 10 ಲಕ್ಷ ರೂ.ಗೆ ಖರೀದಿಸಿದ್ದ ಟ್ರ್ಯಾಕ್ಟರ್ ಸಮೇತ ಸಕ್ಕಿಂಗ್ ಯಂತ್ರಗಳನ್ನು ಜಿಲ್ಲೆಯ ತಾಪಂಗಳಿಗೂ ನೀಡಲಾಗಿತ್ತು. ಆದರೆ, ಮಾನ್ವಿಯಲ್ಲಿ ಟ್ರ್ಯಾಕ್ಟರ್ ಹಾಗೂ ಸಕ್ಕಿಂಗ್ ಯಂತ್ರ ಒಂದು ದಿನವೂ ಬಳಸದಿರುವುದರಿಂದ ಸರ್ಕಾರದ ಯೋಜನೆಗಳು ಹಳ್ಳ ಹಿಡಿಯುತ್ತಿವೆ ಎನ್ನುವುದಕ್ಕೆ ಸಾಕ್ಷಿ ಎಂಬುದು ಸಾರ್ವಜನಿಕರ ಮಾತಾಗಿದೆ.

ಶೌಚಗೃಹಗಳ ಸೆಪ್ಟಿಕ್ ಟ್ಯಾಂಕ್ ತುಂಬಿದರೆ ಖಾಲಿ ಮಾಡಲು ಈ ಸಕ್ಕಿಂಗ್ ಯಂತ್ರ ಬಳಸಿಕೊಳ್ಳಬಹುದು ಎಂದು ತಾಪಂ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಆದರೆ, ಅದಕ್ಕೆ ಪೂರಕ ಕ್ರಮಗಳನ್ನು ಕೈಗೊಳ್ಳದ ಕಾಣ ಈ ಯಂತ್ರ ಬಳಕೆಗೆ ಬಾರದೆ ನಿಂತಿದ್ದು, ಸಾರ್ವಜನಿಕರು ಮಾತ್ರ ಹೆಚ್ಚಿನ ಹಣ ನೀಡಿ ಖಾಸಗಿ ಸಕ್ಕಿಂಗ್ ಮಷಿನ್‌ಗಳ ಮೊರೆ ಹೋಗುವಂತಾಗಿದೆ.

ವಾಹನ ನೋಂದಣಿ ಇಲ್ಲ: ಖಾಸಗಿ ವ್ಯಕ್ತಿಗಳು ವಾಹನ ಖರೀದಿಸಿದ ತಿಂಗಳೊಳಗೆ ನೋಂದಣಿ ಮಾಡಿಸದಿದ್ದರೆ ಆರ್‌ಟಿ ಅಧಿಕಾರಿಗಳು ದಂಡ ಹಾಕುತ್ತಾರೆ. ಆದರೆ, 13 ವರ್ಷವಾದರೂ ವಾಹನಕ್ಕೆ ಆರ್‌ಟಿಒ ಇಲಾಖೆಯಲ್ಲಿ ನೋಂದಣಿ ಮಾಡಿಸದೆ ನಿಲ್ಲಿಸಲಾಗಿದೆ. ವಾಹನ ನೀಡಿದ ಪುಣೆಯ ಎನ್‌ವಿಆರ್ ಇಂಜಿನಿಯರಿಂಗ್ ಪ್ರೈ. ಕಂಪನಿಗೆ ತಾಪಂ ಅಧಿಕಾರಿಗಳು ವಾಹನ ನೋಂದಣಿ ಬಗ್ಗೆ ಕೇಳಿದರೆ, ನೀವೇ ನೋಂದಣಿ ಮಾಡಿಸಿಕೊಳ್ಳಿ ಎಂಬ ಉತ್ತರ ನೀಡಿದೆ. ಇದು ಅಧಿಕಾರಿಗಳಿಗೆ ತಲೆನೋವಾಗಿದೆ. ಅಲ್ಲದೆ, ಚಾಲಕರ ಕೊರತೆಯಿಂದಲೂ ಸಕ್ಕಿಂಗ್ ಯಂತ್ರದಿಂದ ಕಾರ್ಯಾನುಷ್ಠಾನ ಆಗಿಲ್ಲ ಎನ್ನಲಾಗುತ್ತಿದೆ.

ಮಯಾವಾಗಿದ್ದ ವಾಹನ: ಹಲವು ವರ್ಷಗಳಿಂದ ಹಾಗೆ ನಿಂತಿದ್ದ ಟ್ರ್ಯಾಕ್ಟರ್ ಮತ್ತು ಸಕ್ಕಿಂಗ್ ಯಂತ್ರ ರಾತ್ರೋರಾತ್ರಿ ಮಾಯವಾಗಿತ್ತು. ಈ ಬಗ್ಗೆ 2014ರ ಅ.11 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಮತ್ತು ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಂತೆಯೇ ಎರಡ್ಮೂರು ದಿನಗಳಲ್ಲಿ ಟ್ರಾೃಕ್ಟರ್ ಮತ್ತು ಸಕ್ಕಿಂಗ್ ಯಂತ್ರ ಇದ್ದ ಜಾಗಕ್ಕೆ ಮರಳಿ ಅಚ್ಚರಿ ಮೂಡಿಸಿತ್ತು.

ಲಕ್ಷಾಂತರ ರೂ. ವ್ಯರ್ಥ ?

ಸಕ್ಕಿಂಗ್ ಮಷಿನ್ ವಾಹನ ಯಾರು ಚಲಾಯಿಸಬೇಕು, ಹೇಗೆ ನಿರ್ವಹಿಸಬೇಕು ಹಾಗೂ ವಾಹನದ ನೋಂದಣಿ ವೆಚ್ಚದ ಕುರಿತು ಜಿಪಂ ಸಿಇಒಗೆ ಹಿಂದಿನ ತಾಪಂ ಅಧಿಕಾರಿಯೊಬ್ಬರು 2014ರ ಜೂ.26ರಂದು ಪತ್ರ ಬರೆದಿದ್ದರು. ಆದರೆ, ಪತ್ರಕ್ಕೆ ಜಿಪಂ ಅಧಿಕಾರಿಗಳು ಈವರೆಗೂ ಸ್ಪಂದಿಸಿಲ್ಲ. ಲಕ್ಷಾಂತರ ವೆಚ್ಚ ಮಾಡಿ ಖರೀದಿಸಿದ ಟ್ರ್ಯಾಕ್ಟರ್ ಮತ್ತು ಸಕ್ಕಿಂಗ್ ಮಷಿನ್ ಮಾತ್ರ ನಿಂತಲ್ಲೇ ತುಕ್ಕು ಹಿಡಿಯುತ್ತಿವೆ.

ಕೋಟ್: ತಾಲೂಕಿನ ಜನರಿಗೆ ಉಪಯೋಗವಾಗಲಿ ಎಂದು ಸರ್ಕಾರ ಟ್ರ್ಯಾಕ್ಟರ್ ಸಮೇತ ಸಕ್ಕಿಂಗ್ ಮಷಿನ್ ನೀಡಿದೆ. ಆದರೆ ಇದರ ಬಳಕೆಯಿಲ್ಲದೆ ಟ್ರ್ಯಾಕ್ಟರ್ ಸಂಪೂರ್ಣ ಹಾಳಾಗಿ ಹೋಗುತ್ತಿದೆ. ಸಾರ್ವಜನಿಕರು ಖಾಸಗಿಯವರು ಕೇಳಿದಷ್ಟು ಹಣ ಕೊಟ್ಟು ಸೆಪ್ಟಿಕ್ ಟ್ಯಾಂಕ್ ಖಾಲಿ ಮಾಡಿಸುತ್ತಾರೆ. ತಾಪಂ ಅಧಿಕಾರಿಗಳು ವಾಹನದ ಬಳಕೆಗೆ ಕ್ರಮ ಕೈಗೊಂಡು ಜನರಿಗೆ ಸದುಪಯೋಗ ಮಾಡಿಕೊಡಬೇಕು.

> ಬಸವರಾಜ. ಮಾನ್ವಿ ಪಟ್ಟಣ ನಿವಾಸಿ

ಕೋಟ್: ಟ್ರ್ಯಾಕ್ಟರ್ ಸಮೇತ ಸಕ್ಕಿಂಗ್ ಮಷಿನ್ ಕುರಿತು ಹಿರಿಯ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ. ಈ ಯೋಜನೆಯ ಬಗ್ಗೆ ಪರಿಶೀಲಿಸಿ ಸಾರ್ವಜನಿಕರ ಉಪಯೋಗಕ್ಕಾಗಿ ಕ್ರಮ ಕೈಗೊಳ್ಳುತ್ತೇನೆ.

> ಖಾಲೀದ್ ಅಹ್ಮದ್. ತಾಪಂ ಇಒ, ಮಾನ್ವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net