

ಮಾನ್ವಿ: ಮಹಿಳೆಯರು ಹೊರಗಡೆ ಹೊಗುವಾಗ ತಮ್ಮ ಮೈಮೇಲೆ ಅಭರಣಗಳನ್ನು ಕಳ್ಳರಿಗೆ ಕಾಣುವಂತೆ ಹಾಕಿಕೊಳ್ಳಬಾರದು ಎಂದು ಪಿಐ ಮಹಾದೇವಪ್ಪ ಪಂಚಮುಖಿ ತಿಳಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ಬಯಲು ಜಾಗದಲ್ಲಿ ಶುಕ್ರವಾರ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮೈಸೂರಿನ ಕಲಾ ತಂಡದ ಕಲಾವಿದರಿಂದ ನಡೆದ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಮನೆಗಳಲ್ಲಿ ಬೆಲೆ ಬಾಳುವ ಅಭರಣಗಳನ್ನು ಇಡಬಾರದು, ಬ್ಯಾಂಕ್‌ಗಳಿಂದ ಹಣ ತೆಗೆದುಕೊಂಡು ಹೋಗುವಾಗ ಅಪರಿಚಿತ ವ್ಯಕ್ತಿಗಳು ತಮ್ಮ ಗಮನವನ್ನು ಬೇರೆಡೆ ಸೆಳೆದು ತಮ್ಮ ಹಣ ಅಪಹರಿಸುವ ಸಾಧ್ಯತೆ ಇರುತ್ತದೆ ಎಂದರು.
ಪೊಲೀಸ್ ಇಲಾಖೆಯಿಂದ ತಾಲೂಕಿನಾದ್ಯಂತ ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪೊಲೀಸ್ ಇಲಾಖೆಯಿಂದ ನೆರವು ಪಡೆಯಲು ಶುಲ್ಕರಹಿತ ಸಹಾಯವಾಣಿ ಸಂಖ್ಯೆ 112ಗೆ ಕರೆಮಾಡುವ ಮೂಲಕ 24 ಗಂಟೆ ನೆರವನ್ನು ಪಡೆಯಬಹುದು ಎಂದರು.