

ಮಾನ್ವಿ: ರಾಯಚೂರು ಜಿಲ್ಲೆಗೆ ಏಮ್ಸ್ ಆಸ್ಪತ್ರೆ ನೀಡಬೇಕೆ ಹೊರತು ಏಮ್ಸ್ ಮಾದರಿ ಆಸ್ಪತ್ರೆ ಬೇಡವೆಂದು ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ಪಟ್ಟಣದ ಬಸವೃತ್ತದಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿ ವರೆಗೆ ಗುರುವಾರ ಬೈಕ್ ರ‌್ಯಾಲಿ ನಡೆಯಿತು.
2022-23ನೇ ಸಾಲಿನ ಬಜೆಟ್‌ನಲ್ಲಿ ರಾಯಚೂರು ಜಿಲ್ಲೆಗೆ ಏಮ್ಸ್ ಮಾದರಿ ಆಸ್ಪತ್ರೆ ಮಂಜೂರು ಮಾಡುವುದಾಗಿ ಹೇಳಿರುವ ಸಿಎಂ ಬಸವರಾಜ ಬೊಮ್ಮಾಯಿ, ತಮ್ಮ ಹೇಳಿಕೆ ಹಿಂಪಡೆದು ನಮಗೆ ಏಮ್ಸ್ ಆಸ್ಪತ್ರೆ ನೀಡಬೇಕು ಎಂದು ಒತ್ತಾಯಿಸಲಾಯಿತು.
ಏಮ್ಸ್‌ಗಾಗಿ ಅನೇಕ ಹೋರಾಟಗಳು ನಡೆದಿದ್ದರೂ ಸರ್ಕಾರ ಜಿಲ್ಲೆಗೆ ಅನ್ಯಾಯ ಮಾಡುತ್ತಲೇ ಬಂದಿದೆ. ನಮ್ಮ ಬೇಡಿಕೆ ಈಡೇರುವವರೆಗೆ ರೈತ ಸಂಘಟನೆಯಿಂದ ಹೋರಾಟಗಳನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷೆ ಅನಿತಾ ಬಸವರಾಜಮಂತ್ರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್‌ಪಾಷ ದಿದ್ದಿಗಿ, ತಾಲೂಕು ಅಧ್ಯಕ್ಷ ಹೂಳೆಯಪ್ಪ ಕಟಕನೂರು, ಸಿಂಧನೂರು ತಾಲೂಕು ಅಧ್ಯಕ್ಷ ಬಸವರಾಜ ಹಂಚಿನಾಳ್, ಮಲ್ಲಕಾರ್ಜುನರೆಡ್ಡಿ ದಿನ್ನಿ, ರಮೇಶ ದೇವತಗಲ್ ಇತರರಿದ್ದರು.