ಶಿಕ್ಷಕರ ವರ್ಗಾವಣೆ ತಡೆಗೆ ಆಗ್ರಹ

PROTEST
ಮಾನ್ವಿ ಬಿಇಒ ಕಚೇರಿ ಮುಂದೆ ಶಿಕ್ಷಕರ ವರ್ಗಾವಣೆ ತಡೆಹಿಡಿಯುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು. ಜೆ.ಎಚ್. ದೇವರಾಜ, ನರಸಪ್ಪ ಜೂಕೂರು, ಹನುಮಂತ ಇತರರಿದ್ದರು.
Published on

ಮಾನ್ವಿ: ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಶಿಕ್ಷಕರ ಕೊರತೆಯಾಗಿದ್ದು ವರ್ಗಾವಣೆಗೊಂಡ ಶಿಕ್ಷಕರನ್ನು ಬೇರೆಡೆ ಕಳುಹಿಸದಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳ ಮುಖಂಡರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ 1467 ಶಿಕ್ಷಕರ ಅವಶ್ಯಕತೆ ಇದ್ದು, ಕೇವಲ 585 ಶಿಕ್ಷಕರಿದ್ದಾರೆ. 882 ಶಿಕ್ಷಕರ ಕೊರತೆ ಸರಿದೂಗಿಸಲು ವರ್ಗಾವಣೆಯಾಗಿರುವ ಶಿಕ್ಷಕರ ಆದೇಶವನ್ನು ಕೂಡಲೇ ರದ್ದು ಮಾಡಬೇಕು.

ಪ್ರೌಢಶಾಲೆಗೆ 358 ಶಿಕ್ಷಕರ ಅವಶ್ಯಕತೆ ಇದ್ದು, 192 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ 61 ಶಿಕ್ಷಕರು ವರ್ಗಗೊಂಡಿದ್ದಾರೆ. ಇದರಿಂದ ಪ್ರೌಢಶಾಲೆಗೂ ತೊಂದರೆಯಾಗಲಿದೆ. ಕೂಡಲೇ ಶಿಕ್ಷಣ ಇಲಾಖೆ ಆಯುಕ್ತರು ಶಿಕ್ಷಕರ ವರ್ಗಾವಣೆ ಆದೇಶ ರದ್ದು ಮಾಡಬೇಕು. ಇಲ್ಲಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ದಲಿತಪರ ಸಂಘಟನೆಗಳ ತಾಲೂಕು ಸಂಚಾಲಕ ಬಸವರಾಜ ನಕ್ಕುಂದಿ, ಮುಖಂಡರಾದ ಜೆ.ಎಚ್. ದೇವರಾಜ, ನರಸಪ್ಪ ಜೂಕೂರು, ಹನುಮಂತ ಸೀಕಲ್, ಪರಶುರಾಮ ಬಾಗಲವಾಡ, ಕೆ.ಎಂ. ಬಾಷಾ, ವೆಂಕಟೇಶ, ಚಂದ್ರನಾಯಕ, ಬಸವ ಸಂಗಾಪೂರ, ಹನುಮಂತ ನಾಯಕ, ನಾಗೇಶ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net