ಗ್ರಾಮದ ಸಮೀಪವೇ ಖಾತ್ರಿ ಕೆಲಸ ನೀಡಿ

mnv-2
ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಪಂ ಕಚೇರಿ ಮುಂದೆ ಖರಾಬದಿನ್ನಿ ಗ್ರಾಮದ ನರೇಗಾ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಕಾರ್ಮಿಕರಾದ ಮಂಜಮ್ಮ, ಮಲ್ಲಮ್ಮ, ಬಸಮ್ಮ, ಶಾಂತಮ್ಮ, ಯಲ್ಲಮ್ಮ, ಸಿದ್ದಮ್ಮ, ಜಾಲಾಲಬಿ, ಶಿವಮ್ಮ ಇತರರಿದ್ದರು.
Published on

ಮಾನ್ವಿ: ಗ್ರಾಮದ ಸಮೀಪದಲ್ಲೇ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಸ್ಥಳಗಳನ್ನು ಗುರುತಿಸಬೇಕೆಂದು ಆಗ್ರಹಿಸಿ ಖರಾಬದಿನ್ನಿ ಗ್ರಾಮದ ನರೇಗಾ ಕೂಲಿ ಕಾರ್ಮಿಕರು ಶುಕ್ರವಾರ ಪೋತ್ನಾಳ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಾರ್ಮಿಕ ಮಹಿಳೆ ಮಂಜಮ್ಮ ಮಾತನಾಡಿ, ಪೋತ್ನಾಳ ಪಂಚಾಯಿತಿಯಿಂದ ಖರಾಬದಿನ್ನಿ ಗ್ರಾಮದಲ್ಲಿ ನಾಲಾ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ. ಆ ಸ್ಥಳ ಗ್ರಾಮದಿಂದ ದೂರವಾಗಲಿದ್ದು, ಅಲ್ಲಿಗೆ ಮಹಿಳೆಯರು, ವೃದ್ಧರು, ಅಂಗವಿಕಲರು ಹೋಗಿಬರಲು ತೊಂದರೆಯಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿಯಿಂದ ಬೆಳಗ್ಗೆ 7 ಕ್ಕೆ ಹಾಗೂ ಸಂಜೆ 4 ಗಂಟೆಗೆ ಹಾಜರಾತಿ ಪಡೆಯುತ್ತಿರುವುದರಿಂದ ಹೆಚ್ಚಿನ ಸಮಯ ಕಾಮಗಾರಿ ಸ್ಥಳದಲ್ಲೇ ಇರಬೇಕಾಗಿದೆ. ಕೆಲಸದ ಸ್ಥಳದಲ್ಲಿ ಕುಡಿವ ನೀರು, ನೆರಳಿನ ವ್ಯವಸ್ಥೆ ಮಾಡಿರಲ್ಲ.

ಕಾಮಗಾರಿಯನ್ನು ಬೇಗ ಮುಗಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಉದ್ಯೋಗ ಖಾತ್ರಿ ನಿಯಮದಂತೆ ಶೇ.50 ಕೆಲಸ ಮಾಡಿದರೂ ಶೇ. 100 ಕೂಲಿ ಹಾಕಬೇಕು. ಆದರೆ, ಅಧಿಕಾರಿಗಳು ಕಡಿಮೆ ಕೂಲಿ ಹಾಕುತ್ತಿದ್ದಾರೆ ಎಂದು ದೂರಿದರು.

ಕಾರ್ಮಿಕರಾದ ಮಲ್ಲಮ್ಮ, ಬಸಮ್ಮ, ಶಾಂತಮ್ಮ, ಯಲ್ಲಮ್ಮ, ಸಿದ್ದಮ್ಮ, ಜಾಲಾಲಬಿ, ಶಿವಮ್ಮ, ಮೂಕಮ್ಮ, ನಾಗರಾಜ, ಅಮರೇಶ ಜೇಡಿ, ಅಯ್ಯಪ್ಪ, ಮಹಾಂತೇಶ, ಸತೀಶ, ಗಾದಿಲಿಂಗಪ್ಪ, ಹಂಪಯ್ಯ ಬಾದರ್ಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net