ಭತ್ತ, ಜೋಳ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸಿದ ಶಾಸಕ ರಾಜಾವೆಂಕಟಪ್ಪ ನಾಯಕ

Raja Venkatappa Nayaka
ಶಾಸಕ ರಾಜಾವೆಂಕಟಪ್ಪನಾಯಕ
Published on

ಮಾನ್ವಿ: ಮಾನ್ವಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಭತ್ತ ಹಾಗೂ ಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ನಿಗದಿಪಡಿಸಿದ ದರಕ್ಕಿಂತ ಸರ್ಕಾರ ಭತ್ತ ಕ್ವಿಂಟಾಲ್‌ಗೆ 2 ಸಾವಿರ ರೂ. ಮತ್ತು ಜೋಳ ಕ್ವಿಂಟಾಲ್‌ಗೆ 3 ಸಾವಿರ ರೂ.ದರಕ್ಕೆ ಖರೀದಿಸಬೇಕು ಶಾಸಕ ರಾಜಾವೆಂಕಟಪ್ಪ ನಾಯಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಈ ಭಾಗದಲ್ಲಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದು 2.30 ಲಕ್ಷ ಟನ್ ಉತ್ಪಾದನೆ ಗುರಿ ಹೊಂದಲಾಗಿದೆ. ಇಂದಿನ ದರ 1250 ರೂ.ಇದ್ದು ಪ್ರತಿ ಎಕರೆಗೆ 40 ರಿಂದ 50 ಚೀಲ ಇಳುವರಿ ಬಂದಲ್ಲಿ ಈ ದರ ರೈತರಿಗೆ ಖರ್ಚಿಗಿಂತ ಕಡಿಮೆ ಪ್ರಮಾಣದ್ದಾಗುತ್ತದೆ. ಸರ್ಕಾರ ರೈತರ ಹಿತ ಕಾಯುವ ಹಿನ್ನೆಲೆಯಲ್ಲಿ ಕೂಡಲೇ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಿ ಎ ಗ್ರೇಡ್ ಭತ್ತವನ್ನು 2 ಸಾವಿರ ಹಾಗೂ ಸಾಮಾನ್ಯ ಭತ್ತವನ್ನು 1980 ರೂ.ಗೆ ಖರೀದಿ ಮಾಡಬೇಕೆಂದು ಒತ್ತಾಯಿಸಿದರು.

ಈ ಕ್ಷೇತ್ರದ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಿದ್ದು, 75 ಸಾವಿರ ಟನ್‌ನಷ್ಟು ಉತ್ಪಾದನೆ ಗುರಿ ಹೊಂದಲಾಗಿದೆ. ಜೋಳ ಖರೀದಿ ಕೇಂದ್ರ ತೆರೆದು ಕ್ವಿಂಟಾಲ್‌ಗೆ 3 ಸಾವಿರ ರೂ.ಗೆ ಖರೀದಿಸಬೇಕೆಂದು ಎಂದು ಆಗ್ರಹಿಸಿದರು.

ಮಾನ್ವಿ ವಿಧಾನಸಭೆ ಕ್ಷೇತ್ರದಲ್ಲಿ ಕಳೆದ ವರ್ಷ ಭತ್ತ ಮತ್ತು ಜೋಳ ಖರೀದಿ ಕೇಂದ್ರಗಳನ್ನು ಸ್ಥಳೀಯ ಟಿಎಪಿಸಿಎಂಎಸ್ ಹಾಗೂ ಸಿರವಾರನಲ್ಲಿ ಮಾತ್ರ ತೆರೆಯಲಾಗಿತ್ತು. ಈ ಬಾರಿ ಮಾನ್ವಿ, ಸಿರವಾರ, ಹಿರೇಕೊಟ್ನೆಕಲ್, ಪೋತ್ನಾಳ್, ಬಲ್ಲಟಗಿ, ಚಾಗಭಾವಿ, ಹರವಿ, ಬ್ಯಾಗವಾಟ್, ಜಾನೇಕಲ್, ಮದ್ಲಾಪುರ, ನೀರಮಾನ್ವಿ, ಕೆ.ಗುಡದಿನ್ನಿ, ಸಂಗಾಪುರ, ಮಲ್ಲಟ ಸೇರಿದಂತೆ ಇತರಡೆಗಳಲ್ಲಿ ಕೇಂದ್ರಗಳನ್ನು ಪ್ರಾರಂಭಿಸಿ ರೈತರಿಗೆ ಅನುಕೂಲತೆ ಕಲ್ಪಿಸಬೇಕೆಂದು ರಾಜಾವೆಂಕಟಪ್ಪ ನಾಯಕ ಒತ್ತಾಯಿಸಿದರು.

ಜೆಡಿಎಸ್ ವಕ್ತಾರ ನಾಗರಾಜ ಭೋಗಾವತಿ, ಮುಖಂಡರಾದ ನಾರಾಯಣರಾವ್ ದೇಸಾಯಿ, ಗೋಪಾಲನಾಯಕ ಹರವಿ, ಹನುಮಂತ ಭೋವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net