

ಶರಣಬಸವ ನೀರಮಾನ್ವಿ ಮಾನ್ವಿ
ಭತ್ತದ ನಾಡು ಎಂದು ಗುರುತಿಸಿಕೊಂಡಿರುವ ತಾಲೂಕಿನಲ್ಲಿ ಬೇಸಿಗೆ ಬಂತೆಂದರೆ ಸಾಕು ಜಾನುವಾರುಗಳಿಗೆ ಮೇವಿನ ಕೊರತೆ ಕಾಡುತ್ತದೆ. ಭತ್ತದ ಎರಡು ಫಸಲು ಪಡೆಯುತ್ತಿದ್ದ ರೈತರಿಗೆ, ತುಂಗಭದ್ರಾ ಎಡದಂಡೆ ನಾಲೆಯಲ್ಲಿನ ಅಸಮರ್ಪಕ ನೀರಿನ ವ್ಯವಸ್ಥೆಯಿಂದ ಮೇವಿನ ಕೊರತೆ ಎದುರಾಗಿದೆ.
ತಾಲೂಕಿನಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಭತ್ತ, ಜೋಳ, ಸಜ್ಜೆ ಬೆಳೆಯಿಂದ ರೈತರಿಗೆ ಮೇವು ಸಿಗುತ್ತಿತ್ತು. ಆದರೆ, ರೈತರು ಈ ಬಾರಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಹತ್ತಿ, ಮೆಣಸಿನಕಾಯಿ ಬೆಳೆದ ಪರಿಣಾಮ ಜಾನುವಾರುಗಳಿಗೆ ಮೇವು ಸಿಗದಂತಾಗಿದೆ.
ಮುಂಗಾರಿನಲ್ಲಿ ವಾಡಿಕೆಗಿಂತ ಅಂದಾಜು ಶೇ.50 ಹಾಗೂ ಹಿಂಗಾರು ಹಂಗಾಮಿನಲ್ಲಿ ಶೇ.70 ಮಳೆ ಕೊರತೆಯಿಂದಾಗಿ ದನ, ಕರು ಹಾಗೂ ಮೇಕೆ, ಕುರಿಗಳಿಗೆ ಮೇವು ಸಿಕ್ಕರೆ ಸಾಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇಸಿಗೆಯಲ್ಲಿ ಮೇವಿನ ಸಮಸ್ಯೆ ಇದ್ದರೂ ಸರ್ಕಾರ ಬರಗಾಲದಲ್ಲಿ ಮಾತ ಮೇವಿನ ಬ್ಯಾಂಕ್ ಆರಂಭಕ್ಕೆ ಕ್ರಮಕೈಗೊಳ್ಳುತ್ತದೆ. ಹೀಗಾಗಿ ಪ್ರಸ್ತುತ ಮೇವಿನ ಕೊರತೆ ಇದ್ದರೂ ಮೇವು ಬ್ಯಾಂಕ್ ಆರಂಭಕ್ಕೆ ಕ್ರಮಕೈಗೊಂಡಿಲ್ಲ. ಖಾಸಗಿಯವರ ಗೋ ಶಾಲೆಗಳೇ ಜಾನುವಾರುಗಳಿಗೆ ಆಸರೆಯಾಗಿವೆ.
ಸರ್ಕಾರ ಗೋಶಾಲೆ ಆರಂಭಕ್ಕೂ ವ್ಯವಸ್ಥೆ ಮಾಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಪಟ್ಟಣದಲ್ಲಿ ಬಿಡಾಡಿ ದನ-ಕರುಗಳು ಕೊಳೆಯ ಕಾಯಿಪಲ್ಯ, ಕಾಗದ ಇಲ್ಲವೇ ಪ್ಲಾೃಸ್ಟಿಕ್ ತಿಂದು ಅನಾರೋಗ್ಯಕ್ಕೆ ಒಳಗಾಗುತ್ತಿವೆ.
ತಾಲೂಕಿನಲ್ಲಿ 2012 ರ ಗಣತಿ ಪ್ರಕಾರ 65,794 ದನಗಳು, 33,115 ಎಮ್ಮೆ, 82,805 ಕುರಿಗಳು, 47,659 ಮೇಕೆಗಳು ಇದ್ದವು. ಆದರೆ, ಈಗಿನ ಗಣತಿ ಪ್ರಕಾರ ತಾಲೂಕಿನಲ್ಲಿ ದನಗಳು ಹಾಗೂ ಎಮ್ಮೆಗಳ ಸಂಖ್ಯೆ ಇಳಿಮುಖವಾಗಿರುವುದು ಕಂಡುಬರುತ್ತದೆ.
ತಾಲೂಕಿನಲ್ಲಿ ಪ್ರಸ್ತುತ 7730 ದನಗಳು, 9141 ಎಮ್ಮೆಗಳು ಇವೆ. ಮತ್ತೊಮ್ಮೆ ಜಾನುವಾರು ಗಣತಿ ನಡೆಯುತ್ತಿದ್ದು, ಜಾನುವಾರುಗಳ ಸಂಖ್ಯೆ ಇನ್ನೂ ಕಡಿಮೆಯಾಗುವ ಸಾದ್ಯತೆ ಇದೆ.
ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಹೀಗಾಗಿ ಕೂಡಲೇ ತಾಲೂಕು ವ್ಯಾಪ್ತಿಯ ಎಲ್ಲ ಹೋಬಳಿ ಕೇಂದ್ರಗಳಲ್ಲಿ ತಾಲೂಕು ಆಡಳಿತ ಮೇವು ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ರೈತರ ಒತ್ತಾಸೆಯಾಗಿದೆ. ಬಹುತೇಕ ರೈತರು ಹೈನುಗಾರಿಕೆಯನ್ನು ನಂಬಿ ಬದುಕುತ್ತಿದ್ದಾರೆ.
ಈಗ ಹೊಲಗಳಲ್ಲಿ ಹಸಿ ಮೇವಿನ ಕೊರತೆಯಿದೆ. ನೀರಿನ ಸಮಸ್ಯೆಯಿಂದಾಗಿ ಜಾನುವಾರುಗಳಿಗೆ ಮೇವು ಬೆಳೆಯಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸರ್ಕಾರ ಸೂಕ್ತ ಕ್ರಮ ವಹಿಸಿ ಎಲ್ಲ ಕಡೆಗಳಲ್ಲಿ ಮೇವು ಕೇಂದ್ರ ಆರಂಭಿಸಿ ರೈತರ ನೆರವಿಗೆ ಬರಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.
ತಾಲೂಕಿನ ಕೆಲವಡೆ ಭತ್ತದ ಕಟಾವು ಆರಂಭವಾಗಿದ್ದು, ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಕಾಡದಿರಲಿ ಎಂದು ರೈತರು ಈಗಿನಿಂದಲೇ ಸಂಗ್ರಹಣೆ ಮಾಡಲು ಮುಂದಾಗಿದ್ದಾರೆ. ಹೆಚ್ಚಿನ ಸಂಖ್ಯೆಯ ರೈತರು ಮೇವು ಖರೀದಿಸಿ ಟ್ರ್ಯಾಕ್ಟರ್ ಮೂಲಕ ಸಾಗಿಸಿ ಸಂಗ್ರಹ ಮಾಡುತ್ತಿದ್ದಾರೆ.
ಒಂದು ಟ್ರಾೃಕ್ಟರ್ ಟ್ರಾೃಲಿ ಭತ್ತದ ಮೇವು ಬಾಡಿಗೆ, ಕೂಲಿ ಖರ್ಚು ಸೇರಿ 10 ಸಾವಿರ ರೂ. ವೆಚ್ಚವಾಗುತ್ತಿದೆ. ಕೆಲ ರೈತರು ದನ-ಕರುಗಳಿಗೆ ಉಚಿತವಾಗಿ ಮೇವು ನೀಡಿದರೆ, ಇನ್ನು ಕೆಲವರು ಹಣ ಪಡೆದು ಮೇವು ನೀಡುತ್ತಿದ್ದಾರೆ.
ಪಟ್ಟಣದಲ್ಲಿ ಮಾನ್ವಿ ಮಿತ್ರ ಮಂಡಳಿ ಚಾರಿಟಬಲ್ ಟ್ರಸ್ಟ್‌ನಿಂದ ಕಳೆದ 5 ವರ್ಷಗಳಿಂದ ಗೋ-ಶಾಲೆ ನಡೆಸಲಾಗುತ್ತಿದೆ. ಇಲ್ಲಿ 150 ದನ-ಕರುಗಳಿವೆ. ಮೇವಿನ ಕೊರತೆಯಿಂದ ರೈತರು ದನ-ಕರುಗಳನ್ನು ಸಾಕಲಾಗದೆ ಗೋಶಾಲೆಗೆ ತಂದು ಬಿಟ್ಟಿದ್ದಾರೆ. ಆದರೆ, ಈಗ ಗೋಶಾಲೆಯೇ ದನ-ಕರುಗಳಿಗೆ ಮೇವಿನ ಕೊರತೆ ಎದುರಾಗಿದೆ.
ರೈತರು ಗೋಶಾಲೆಗೆ ಉಚಿತವಾಗಿ ಮೇವು ದಾನ ಮಾಡಿದರೆ ಟ್ರ್ಯಾಕ್ಟರ್ ಮೂಲಕ ತರಲಾಗುತ್ತಿದೆ. ಇದುವರೆಗೆ ಅನೇಕ ರೈತರು ಮೇವು ದಾನ ಮಾಡಿದ್ದಾರೆ. ಆದರೆ, ಕೆಲ ರೈತರು ಬೇರೆ ತಾಲೂಕಿಗೆ ಮೇವು ಸಾಗಣೆ ಮಾಡುತ್ತಿರುವುದರಿಂದ ಗೋಶಾಲೆಯಲ್ಲಿನ ದನ-ಕರುಗಳಿಗೆ ಮೇವು ಸಿಗುತ್ತಿಲ್ಲ.
ಗೋಶಾಲೆಗೆ ದಾನಿಗಳು ಮೇವು ಉಚಿತವಾಗಿ ಕೊಡಿಸಿದರೆ ಅನುಕೂಲವಾಗಲಿದೆ. ತಾಲೂಕು ಆಡಳಿತ ಕೂಡ ಮೇವಿನ ಸಂಗ್ರಹಕ್ಕೆ ಸಹಕಾರ ನೀಡಲಿ ಎಂಬುದು ಗೋಶಾಲೆ ಟ್ರಸ್ಟ್‌ನವರ ಕೋರಿಕೆಯಾಗಿದೆ.
ಇಲಾಖೆಯಿಂದ ಮೇವು ಬಿತ್ತನೆ ಬೀಜ ಪೂರೈಕೆಯಾಗಿಲ್ಲ. ಜೂನ್‌ನಲ್ಲಿ ಪಹಣಿ ಹಾಗೂ ಆಧಾರ್ ಕಾರ್ಡ್ ತಂದರೆ ರೈತರಿಗೆ ಮೇವಿನ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು, ತಾಲೂಕಿನಲ್ಲಿ ಇಲಾಖೆಯಿಂದ ಮೇವಿನ ಸಂಗ್ರಹಣೆ ಮಾಡಿಲ್ಲ. | ಡಾ.ಪೋಮ್‌ಸಿಂಗ್ ಎಲ್., ಪಶು ಇಲಾಖೆ ಸಹಾಯಕ ನಿರ್ದೇಶಕ, ಮಾನ್ವಿ ಸರ್ಕಾರದಿಂದ ಮೇವಿನ ಸಂಗ್ರಹಣೆ ಕಾರ್ಯ ನಡೆಯುತ್ತಿಲ್ಲ. ಈ ಹಿಂದೆ ಬರಗಾಲ ಬಂದಾಗ ಮೇವಿನ ಕೇಂದ್ರ ಮಾಡಿದ್ದರು. ಬೇಸಿಗೆಯಲ್ಲಿ ಮೇವಿನ ಸಮಸ್ಯೆಯಿದ್ದರೂ ಸಂಗ್ರಹ ಕೇಂದ್ರ ಮಾಡುತ್ತಿಲ್ಲ. ತಾಲೂಕು ಆಡಳಿತದಿಂದ ಮೇವಿನ ಸಂಗ್ರಹ ಕೇಂದ್ರ ಮಾಡಿದರೆ ದನ-ಕರುಗಳಿಗೆ ಅನುಕೂಲವಾಗಲಿದೆ. | ಲಿಂಗರಾಜು, ರೈತ, ಹಳ್ಳಿಹೊಸೂರು