

ಮಾನ್ವಿ: ತಾಲೂಕಿನ ನೀರಮಾನ್ವಿ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಮೂಲ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಬಿಜೆಪಿ ಮಂಡಲದಿಂದ ಬುಧವಾರ ತಹಸೀಲ್ದಾರ್ ಭೀಮರಾಯ ರಾಮಸಮುದ್ರಗೆ ಮನವಿ ಸಲ್ಲಿಸಲಾಯಿತು.
ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದೆ. ದೇವಿಯ ದರ್ಶನ ಹಾಗೂ ಪೂಜೆ ಸಲ್ಲಿಸಲು ರಾಜ್ಯ ಮತ್ತು ಅಂತಾರಾಜ್ಯದಿಂದ ಭಕ್ತರು ಆಗಮಿಸುತ್ತಾರೆ. ಆದರೆ, ಅವರಿಗೆ ಮೂಲ ಸೌಲಭ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ, ಸ್ನಾನಗೃಹ, ವಸತಿ ಸೌಕರ್ಯವಿಲ್ಲ. ಅಲ್ಲದೆ ಕುಡಿವ ನೀರಿನ ಸೌಲಭ್ಯ ಮರೀಚಿಕೆಯಾಗಿದೆ. ದೇವಸ್ಥಾನವು 6.12 ಎಕರೆ ವಿಸ್ತೀರ್ಣ ಹೊಂದಿದೆ. ದೇವಸ್ಥಾನದ ಆವರಣದಲ್ಲಿ ತಡೆಗೋಡೆ ಇಲ್ಲದ ಕಾರಣ ಸ್ವಚ್ಛತೆ ಮಾಯವಾಗಿದೆ. ಎ-ಗ್ರೇಡ್ ದೇವಾಲಯಗಳ ಪಟ್ಟಿಯಲ್ಲಿ ಸೇರಿಸಿದರೆ ಹೆಚ್ಚಿನ ಸೌಲಭ್ಯಗಳು ದೊರೆಯಲಿದ್ದು, ಕ್ರಮವಹಿಸಬೇಕೆಂದು ಆಗ್ರಹಿಸಿದರು. ಬಿಜೆಪಿ ಮಾನ್ವಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ರವಿಕುಮಾರ ಸಾಹುಕಾರ, ಪ್ರಮುಖರಾದ ವಿಶ್ವನಾಥ ನಂದಿಹಾಳ ವಕೀಲರು, ಉಮಾಪತಿ ನಾಯಕ ಇತರರಿದ್ದರು.