

ಮಾನ್ವಿ : ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಂಕಷ್ಟಗಳಿಗೆ ಸ್ಪಂದಿಸುವವರನ್ನು ಜನರು ಆಯ್ಕೆ ಮಾಡುತ್ತಾರೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಪಟ್ಟಣದ ಕೋನಾಪುರಪೇಟೆ, ವಾಲ್ಮೀಕಿ ವೃತ್ತ, ಬಸವ ವೃತ್ತದಲ್ಲಿ ಭಾನುವಾರ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಜಿ ಶಾಸಕರೊಬ್ಬರು ನಾನು ರೈತರ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವರು ಶಾಸಕರಿದ್ದಾಗ ಕ್ಷೇತ್ರದಲ್ಲಿ ಏನು ಮಾಡಿದ್ದಾರೆ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ಕೆಲವರು ಜೂಜು ಆಡಿಸುವುದು ಶಾಸಕರ ಕರ್ತವ್ಯ ಎಂದುಕೊಂಡಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಗೆ ಕ್ಷೇತ್ರದ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿರುಗೇಟು ನೀಡಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲಮನ್ನಾ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಿಕ್ಕೆ ಬರುವುದು ಖಚಿತ ಎಂದು ಶಾಸಕ ಹೇಳಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ ಬಲ್ಲಟಗಿ, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ, ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಪ್ರಮುಖರಾದ ಖಲೀಲ್ ಖುರೇಷಿ, ಸೈಯದ್ ಹುಸೇನ್, ಡಿ.ಚ್.ದೇವರಾಜ, ಹನುಮಂತ ಭೋವಿ, ಹಂಪನಗೌಡ ನೀರಮಾನ್ವಿ, ಗೋಪಾಲ ನಾಯಕ ಹರವಿ, ಲಕ್ಷ್ಮಣ ಯಾದವ, ಉರುಕುಂದ ಜಗ್ಲಿ, ಶರಣಪ್ಪ ಮೇದಾ ಇತರರು ಇದ್ದರು.