ರೈತರ ಏಳಿಗೆಗಾಗಿ ಜಲಧಾರೆ ರಥಯಾತ್ರೆ; ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿಕೆ

20042022 Manvi Jaladhare chorito
Published on

ಮಾನ್ವಿ: ತುಂಗಭದ್ರಾ, ಕೃಷ್ಣಾ ಅಣೆಕಟ್ಟು ಯೋಜನೆಗಳಿಗೆ ಕಾಯಕಲ್ಪ ಕಲ್ಪಿಸಿ, ನಾಲೆ ಕೆಳ ಭಾಗದ ರೈತರ ಹೊಲಗಳಿಗೆ ನೀರು ಕಲ್ಪಿಸುವುದು ಮತ್ತು ಗ್ರಾಮಿಣ ಪ್ರದೇಶಗಳ ಅಭಿವೃದ್ಧಿ ಜನತಾ ಜಲಧಾರೆ ಮೂಲ ಉದ್ದೇಶ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರ ಸೂಚನೆ ಮೇರೆಗೆ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿವಿಧ ಯೋಜನೆಗಳನ್ನು ರೂಪಿಸಿ ಏ.16ರಂದು ಜನತಾ ಜಲಧಾರೆ ರಥ ಸಂಚಾರಕ್ಕೆ ಚಾಲನೆ ನೀಡಿದ್ದಾರೆ. ಏ.21ರಂದು ಸಂಜೆ 6ಕ್ಕೆ ರಥಯಾತ್ರೆ ಕವಿತಾಳಕ್ಕೆ ಆಗಮಿಸಲಿದೆ. 22ರಂದು ಬೆಳಗ್ಗೆ ಮಾನ್ವಿ, ಸಿರವಾರ ತಾಲೂಕಿನ ವಿವಿಧ ಗ್ರಾಮಗಳಿಗೆ ರಥ ಸಂಚಾರ ಕೈಗೊಳ್ಳಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತುಂಗಭದ್ರಾ ಜಲಾಶಯದಲ್ಲಿ ಹೊಳಿನಿಂದ ಎದುರಾಗಿರುವ ನೀರು ಸಂಗ್ರಹಣೆ ಕೊರತೆ ನೀಗಿಸುವುದು, ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಹಾಗೂ ಸಿಂಗಟಾಲೂರು, ಒಳಬಳ್ಳಾರಿ ಏತ ನೀರಾವರಿ, ವಿಜಯನಗರ ಕಾಲುವೆ ಆಧುನೀಕರಣ, ರಾಜೋಳ್ಳಿಬಂಡಾ ಯೋಜನೆ, ಅಣೆಕಟ್ಟುಗಳ ನಿರ್ಮಾಣ, ವಿತರಣಾ ಕಾಲುವೆಗಳ ಪುನಶ್ಚೇತನ, ಅಂತಾರಾಜ್ಯ ಜಲ ವಿವಾದಗಳ ಇತ್ಯರ್ಥ ಮತ್ತು ಆಂಧ್ರಪ್ರದೇಶ, ತೆಲಂಗಾಣಾ ರಾಜ್ಯಗಳೊಂದಿಗೆ ಸಮಾಲೋಚಿಸಿ ವಿವಿಧ ಯೋಜನೆಗಳಿಗೆ ಆದ್ಯತೆ ಕಲ್ಪಿಸುವುದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಉದ್ದೇಶ ಎಂದರು.

ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ, ತಾಲೂಕ ಅಧ್ಯಕ್ಷ ಟಿ.ಮಲ್ಲಿಕಾರ್ಜುನಗೌಡ ಬಲ್ಲಟಗಿ, ಪ್ರಮುಖರಾದ ನಾಗರಾಜ ಭೋಗಾವತಿ, ಖಲೀಲ್ ಖುರೇಶಿ, ಪುರಸಭೆ ಸದಸ್ಯ ಬಾಷಾ ಸಾಬ್, ಗೋಪಾಲ ನಾಯಕ ಹರವಿ, ಎಚ್.ಮೌನೇಶ, ಹನುಮಂತ ಭೋವಿ, ಪಿ.ರವಿಕುಮಾರ, ಮೌಲಾಸಾಬ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net