

ಮಾನ್ವಿ: ಮಾನ್ವಿ ಮತ್ತು ಸಿರವಾರ ತಾಲೂಕಿನ ಗ್ರಾಮಗಳಿಗೆ ರುದ್ರಭೂಮಿ ಮಂಜೂರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ಸೋಮವಾರ ಮಾನ್ವಿ, ಸಿರವಾರ ಉಭಯ ತಾಲೂಕಿನ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ರುದ್ರಭೂಮಿಗಳಿಗೆ ಗ್ರಾಮ ಪಂಚಾಯಿತಿಗಳ ಅನುದಾನದಲ್ಲಿ ಸುತ್ತ ಫೆನ್ಸಿಂಗ್ ಹಾಕುವ ಮೂಲಕ ಒತ್ತುವರಿಯನ್ನು ತಡೆಯಬೇಕು ಎಂದರು.
ಪಹಣಿ ತಿದ್ದುಪಡಿ ಹಾಗೂ ಭೂಮಿ ಸಮೀಕ್ಷೆ ಅರ್ಜಿಗಳನ್ನು ಶೀಘ್ರ ಇತ್ಯರ್ಥಗೊಳಿಸಿ ಭೂ ಮಾಹಿತಿಗಳನ್ನು ಸರಳವಾಗಿ ರೈತರಿಗೆ ನೀಡಬೇಕು. ಆನ್ಲೈನ್ ತಂತ್ರಾಂಶದಲ್ಲಿ ಮಾಹಿತಿ ಸಿಗುವಂತೆ ಸಿದ್ಧಪಡಿಸಬೇಕು. ರೈತರನ್ನು ಕಚೇರಿಗಳಿಗೆ ಅಲೆದಾಡಿಸಬಾರದು. ಸರ್ಕಾರಿ ಭೂ ಹಂಚಿಕೆಯಲ್ಲಿ ಮಾಜಿ ಸೈನಿಕರಿಗೆ ಶೇ.10 ಮೀಸಲಾತಿಯ 1969 ಭೂ ರಹಿತರಿಗೆ ಭೂ ಮಂಜೂರು ಕಾಯ್ದೆಯಡಿ ಸೈನಿಕರನ್ನು ಮೊದಲು ಪರಿಗಣಿಸಬೇಕು. ಕಚೇರಿಗೆ ಅಲೆದಾಡಿಸದಂತೆ ಶೀಘ್ರ ಇತ್ಯರ್ಥಗೊಸಬೇಕು ಎಂದು ಸಹಾಯಕ ಆಯುಕ್ತೆ ಮಹಿಬೂಬಿಗೆ ಸೂಚಿಸಿದರು.
ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸಮರ್ಪಕ ನೀರು ಸರಬರಾಜಿಗಾಗಿ ಅಧಿಕಾರಿಗಳು ಹಾಗೂ ಪುರಸಭೆ ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಕುಡಿಯುವ ನೀರಿನ ವಿಷಯದಲ್ಲಿ ನಿರ್ಲಕ್ಷೃ ವಹಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹಂಪಯ್ಯ ನಾಯಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಮಾತನಾಡಿ, ಪುರಸಭೆ ವ್ಯಾಪ್ತಿಗೆ ಸಂಬಂಧಿಸಿದಂತೆ 53 ಸಾವಿರ ಜನಸಂಖ್ಯೆ ಇದೆ. ಪ್ರತಿ 3 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಅಮೃತ ಯೋಜನೆ ಹಾಗೂ ಜಲಜೀವನ್ ಮಿಷನ್ ಮೂಲಕ ಸಮರ್ಪಕ ನೀರು ಸರಬರಾಜಿಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ರಬ್ಬಣಕಲ್ ಶುದ್ಧೀಕರಣ ಘಟಕದ ಪೈಪ್‌ಲೈನ್‌ಗೆ ಏರ್ ಪೈಪ್ ಜೋಡಣೆ ಮಾಡಬೇಕಾಗಿದೆ. ರಬ್ಬಣಕಲ್ ಶುದ್ಧೀಕರಣ ಘಟಕಕ್ಕೆ ನೀರು ಸರಬರಾಜು ಮಾಡುವ ಜಾಕ್‌ವೆಲ್‌ಗೆ ಪ್ರತ್ಯೇಕವಾಗಿ ಮೋಟರ್ ಸ್ಥಾಪಿಸಬೇಕಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಭೂ ಸಮಸ್ಯೆಗಳ ಶೀಘ್ರ ಇತ್ಯರ್ಥ, ರಸ್ತೆ, ಚರಂಡಿ, ಯುಜಿಡಿ, ಕ್ರೀಡಾಂಗಣ, ಉದ್ಯೋಗ ಖಾತ್ರಿ ಯೋಜನೆ, ಸ್ವಚ್ಚತೆ ಸೇರಿ ಮೂಲಭೂತ ಸೌಕರ್ಯಗಳ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಬಿಕೆ ಅಮರೇಶಪ್ಪ ವಕೀಲ, ತಹಸೀಲ್ದಾರ್ ರಾಜು ಪಿರಂಗಿ, ನಗರ ಯೋಜನಾ ನಿರ್ದೇಶಕ ಜಗದೀಶ ಗಂಗಣ್ಣವರ್, ಬಿಇಒ ಚಂದ್ರಶೇಖರ ದೊಡ್ಡಮನಿ, ಪಿಐ ಎಸ್.ಬಿ. ಹಿರೇಮಠ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.