

ಮಾನ್ವಿ: ಇಲ್ಲಿನ ಇಸ್ಲಾಂ ನಗರದ ಗೌಸೀಯಾ ಮಸೀದಿ ಬಳಿ ಖಾಲಿ ನಿವೇಶನದಲ್ಲಿ ಆಹಾರ ಪದಾರ್ಥಗಳಿಗೆ ಕಲಬೆರಕೆ ಬೆರೆಸಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಮಾನ್ವಿ ಹಾಗೂ ಸಿಂಧನೂರು ತಾಲೂಕು ಆಹಾರ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.
ಮಾನ್ವಿ ತಾಲೂಕು ಆಹಾರ ನಿರೀಕ್ಷಕ ದೇವರಾಜ ಮಾತನಾಡಿ, ತಹಸೀಲ್ದಾರ್ ಮಾರ್ಗದರ್ಶನದಲ್ಲಿ ಆಹಾರ ಕಲಬೆರಕೆ ಮಾಡುತ್ತಿರುವ ಖಚಿತವಾದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಅರಿಶಿಣ, ಕಡಲೆ ಕಾಳು, ಕೆಂಪು ಕಡಲೆ ಕಾಳು, ಧನಿಯಾ, ಮೆಣಸು, ನೀಲಗೀರಿ ಎಲೆ, ಕೆಂಪು ಕೊಬ್ಬರಿ, ಚಕ್ಕೆ ಸೇರಿದಂತೆ ಒಟ್ಟು 4 ಲಕ್ಷ ರೂ. ಮೊತ್ತದ 846 ಕೆಜಿ ಕಲಬೆರಕೆ ಆಹಾರ ಪದಾರ್ಥಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಆಹಾರ ಪದಾರ್ಥಗಳನ್ನು ಕಲಬೆರಕೆ ಮಾಡುವ ವ್ಯಕ್ತಿಗಳು ಪರಾರಿಯಾಗಿದ್ದು, ನಿವೇಶನ ಮಾಲೀಕರಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಿಂಧನೂರಿನ ಆಹಾರ ಸುರಕ್ಷಾಧಿಕಾರಿ ಗುರುರಾಜ ಮಾತನಾಡಿ. ಕಳಪೆ ಮತ್ತು ಹಾಳಾದ ಆಹಾರ ಪದಾರ್ಥಗಳಿಗೆ ಕೃತಕ ರಾಸಾಯನಿಕ ಬಣ್ಣ ಬಳಿದು ಗ್ರಾಹಕರನ್ನು ಆಕರ್ಷಿಸಿ ಮಾರಾಟ ಮಾಡಲಾಗುತ್ತಿದೆ. ಇಂತಹ ಆಹಾರ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆ. ಸದ್ಯ ವಶಕ್ಕೆ ಪಡೆದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಿದ್ದು ವರದಿ ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪುರಸಭೆ ಅಧಿಕಾರಿ ಮಹೇಶಕುಮಾರ ಇತರರಿದ್ದರು.