

ಮಾನ್ವಿ: ಮಂತ್ರಾಲಯದ ರಾಘವೇಂದ್ರತೀರ್ಥ ಗುರು ಸಾರ್ವಭೌಮರ 351ನೇ ಆರಾಧನಾ ಮಹೋತ್ಸವ ಅಂಗವಾಗಿ ಪಟ್ಟಣದ ಪಂಪಾ ಹೌಸಿಂಗ್ ಕಾಲನಿಯಲ್ಲಿನ ಮಧ್ವಾಚಾರ್ಯ ಮೂಲಮಹಾ ಸಂಸ್ಥಾನ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ಆ.8ರಿಂದ 14ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪಂಡಿತ ಪ್ರಾಣೇಶಾಚಾರ್ಯ ಚಿಕ್ಕದಿನ್ನಿ ಇವರಿಂದ ದಾಸರು ಕಂಡ ಗುರು ಸಾರ್ವಭೌಮರು ವಿಷಯದ ಕುರಿತು ಪ್ರವಚನ ನಡೆಯಲಿದೆ. 11ರಂದು ಆರಾಧಾನಾ ಮಹೋತ್ಸವದ ಅಂಗವಾಗಿ ಸಂಜೆ 5.30ರಿಂದ ಗೋಪೂಜೆ, ಧ್ವಜಾರೋಹಣ, ಶ್ರೀಲಕ್ಷ್ಮೀ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮ, ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸ್ವಸ್ತಿವಾಚನ, ಮಹಾಮಂಗಳಾರತಿ ಹಾಗೂ ಶ್ರೇಯ ಪ್ರಾರ್ಥನೆ. 12ರಂದು ಪೂರ್ವಾರಾಧನೆ, 13 ಮಧ್ಯಾರಾಧನೆ ಹಾಗೂ ಬೆಳಗ್ಗೆ 6.30ಕ್ಕೆ ಅಷ್ಟಾಕ್ಷರ ಮಂತ್ರಹೋಮ ಹಾಗೂ ಪೂರ್ಣಾಹುತಿ, ಸಾಮೂಹಿಕ ಉಪನಯನ, ಆ.14 ರಂದು ಉತ್ತರಾಧನೆ ಹಾಗೂ ಬೆಳಗ್ಗೆ 10ಕ್ಕೆ ಪಟ್ಟಣದ ರಾಜಬೀದಿಗಳಲ್ಲಿ ವಿವಿಧ ಭಜನಾ ಮಂಡಳಿಗಳೊಂದಿಗೆ ಮಹಾರಥೋತ್ಸವ ನಡೆಯಲಿದೆ ಎಂದು ಗೌರವ ವಿಚಾರಣಾಕರ್ತ ಮುದ್ದು ರಂಗರಾವ್, ಶಾಖಾ ವ್ಯವಸ್ಥಾಪಕ ರಾಘವೇಂದ್ರರಾವ್ ದೇಸಾಯಿ ತಿಳಿಸಿದ್ದಾರೆ.