

ಮಾನ್ವಿ: ಮೇ 7 ರಂದು ಲೋಕಸಭೆ ಚುನಾವಣೆಯಲ್ಲಿ ಶೇ.100 ಮತದಾನವಾಗಲು ಗುರಿ ಹೊಂದಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಪ್ರಕಾಶ್.ವಿ. ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಮತದಾರರ ಪಟ್ಟಿ ಅಂತಿಮಗೊಂಡಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಮಾನ್ವಿ ಹಾಗೂ ಸಿರವಾರ ತಾಲೂಕಿನಲ್ಲಿ 276 ಮತಗಟ್ಟೆಗಲಿದ್ದು, ಮೂಲ ಸೌಲಭ್ಯ ಒದಗಿಸಲಾಗುವುದು. ಮಾನ್ವಿ ವಿಧಾನಸಭಾ ವ್ಯಾಪ್ತಿಯಲ್ಲಿ 1,16,953 ಪುರುಷ , 1,22,530 ಮಹಿಳಾ, 64 ತೃತೀಯಲಿಂಗಿ ಸೇರಿ ಒಟ್ಟು 2,39,547 ಮತದಾರರಿದ್ದಾರೆ ಎಂದರು.
ಶನಿವಾರ ಪಟ್ಟಣದ ಸರ್ಕಾರಿ ಬಾಷುಮಿಯ ಪದವಿ ಕಾಲೇಜ್ ಭದ್ರತಾ ಕೋಣೆಯಲ್ಲಿರುವ ಇವಿಎಂ ಮಿಷನ್‌ಗಳ ಸಿದ್ಧತೆ ಕೈಗೊಳ್ಳಲಾಗಿದೆ. ಮೇ. 1 ರಂದು ಪಿಆರ್‌ಒ ಮತ್ತು ಎಪಿಆರ್‌ಒ ಗಳು ಸೇರಿ ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ಪಟ್ಟಣದ ಕಾಕತೀಯ ಶಿಕ್ಷಣ ಸಂಸ್ಥೆಯಲ್ಲಿ 2ನೇ ಹಂತದ ತರಬೇತಿ ನೀಡಲಾಗುತ್ತಿದೆ. ಮತದಾರರ ಆಕರ್ಷಣೆಗಾಗಿ 5 ಸಖಿ , 1 ಅಂಗವಿಕಲರ, 1 ಸಾಂಪ್ರದಾಯಿಕ 1 ಯುವ , 1 ಮಾದರಿ ಮತಗಟ್ಟೆ ಸೇರಿ 9 ವಿಶೇಷವಾದ ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಬಿಎಲ್‌ಒ ಅಧಿಕಾರಿಗಳು ಮನೆ ಮನೆಗೆ ತೆರಳಿ ಮತದಾರರ ಚೀಟಿಗಳನ್ನು ಹಂಚಿಕೆ ಮಾಡಿದ್ದಾರೆ. ಮಾನ್ವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜನರಲ್ಲಿ ಸ್ವೀಪ್ ಕಾರ್ಯಕ್ರಮದ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಚುನಾವಣೆ ಅಕ್ರಮ ತಡೆಯಲು ನಿಗಾವಹಿಸಲಾಗಿದೆ ಎಂದು ತಿಳಿಸಿದರು.